ಸಿಡ್ನಿ: ಟೀಂ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ಸ್ವೀಕರಿಸಿದಾಗಿನಿಂದ ಟೀಂ ಇಂಡಿಯಾ ಆಟಗಾರರು ಫುಲ್ ಕನ್ ಫ್ಯೂಸ್ ಆಗಿದ್ದಾರೆ ಎನ್ನುತ್ತಿದೆ ಕೆಲವು ವರದಿಗಳು.
ಟೀಂ ಇಂಡಿಯಾ ಈಗ ಸತತ ಸೋಲಿನಿಂದ ಕಂಗೆಟ್ಟಿದೆ. ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಟೀಂ ಇಂಡಿಯಾದಲ್ಲೂ ಗೆಲುವು ಕೂಡಾ ಅವರ ಹಿಂದೆಯೇ ಹೋಗಿದೆ. ಗಂಭೀರ್ ಕೋಚ್ ಆದ ಬಳಿಕ ತಂಡದ ಬ್ಯಾಟಿಂಗ್ ಪಾತಾಳಕ್ಕೆ ಕುಸಿದಿದೆ. ಗೆಲುವೂ ಅಪರೂಪವಾಗಿದೆ.
ಈ ನಡುವೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ದ್ರಾವಿಡ್ ಇದ್ದಾಗ ಯಾವುದೇ ಆಟಗಾರನನ್ನು ಕೈ ಬಿಡುವ ಮೊದಲು ಅಥವಾ ಆತನ ಪಾತ್ರವೇನು ಎಂಬ ಬಗ್ಗೆ ಸೂಕ್ತ ರೀತಿಯಲ್ಲಿ ಸಂವಹನ ನಡೆಸಲಾಗುತ್ತಿತ್ತು. ರವಿಶಾಸ್ತ್ರಿ ಕಾಲದಲ್ಲೂ ಇದು ನಡೆಯುತ್ತಿತ್ತು.
ಆದರೆ ಗಂಭೀರ್ ಕೋಚ್ ಆದಾಗಿನಿಂದ ತಂಡದ ಆಟಗಾರರು ತಮ್ಮ ಪಾತ್ರವೇನು ಎಂಬ ಬಗ್ಗೆ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನ ಕೋಚ್ ಗಳಿಗೆ ಹೋಲಿಸಿದರೆ ಗಂಭೀರ್ ಆಟಗಾರರ ಜೊತೆ ಸರಿಯಾಗಿ ಸಂವಹನ ನಡೆಸುತ್ತಿಲ್ಲ ಎಂಬ ಆರೋಪಗಳಿವೆ. ತಂಡದ ಆಯ್ಕೆ, ಆಟಗಾರರನ್ನು ನಿಭಾಯಿಸುವ ರೀತಿಯಲ್ಲಿ ಗಂಭೀರ್ ಸಂಪೂರ್ಣ ಗೊಂದಲ ಸೃಷ್ಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ಇತ್ತೀಚೆಗಿನ ದಿನಗಳಲ್ಲಿ ಮೊದಲಿನ ಆಟ ಆಡುತ್ತಿಲ್ಲ ಎನ್ನಲಾಗಿದೆ.