ಮೆಲ್ಬೊರ್ನ್: ಟೀಂ ಇಂಡಿಯಾದ ಸತತ ಬ್ಯಾಟಿಂಗ್ ವೈಫಲ್ಯದಿಂದ ಬೇಸತ್ತ ಕೋಚ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ರೂಂನಲ್ಲಿ ನಂಗೂ ನೋಡುವಷ್ಟು ನೋಡಿ ಸಾಕಾಯ್ತು ಎಂದು ಕೂಗಾಡಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಮೊದಲು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯನ್ನೂ ಬ್ಯಾಟಿಂಗ್ ವೈಫಲ್ಯದಿಂದಾಗಿ ಸೋಲಬೇಕಾಯಿತು. ಈಗ ಆಸ್ಟ್ರೇಲಿಯಾ ವಿರುದ್ಧವೂ ಅದೇ ತಪ್ಪು ಪುನರಾವರ್ತನೆಯಾಗುತ್ತಿದ್ದು ಸತತ ಸೋಲುಗಳನ್ನು ಕಾಣುತ್ತಿದೆ.
ಇದರಿಂದ ಅಭಿಮಾನಿಗಳೂ ಟೀಂ ಇಂಡಿಯಾದ ಬ್ಯಾಟರ್ ಗಳ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಮೆಲ್ಬೊರ್ನ್ ಟೆಸ್ಟ್ ನ್ನು ಗೆಲ್ಲಲಾಗದಿದ್ದರೆ ಕನಿಷ್ಠ ಡ್ರಾ ಮಾಡಿಕೊಳ್ಳುವ ಅವಕಾಶವಿದ್ದೂ ಕೈ ಚೆಲ್ಲಿದ ಬ್ಯಾಟರ್ ಗಳ ಮೇಲೆ ಗೌತಮ್ ಗಂಭೀರ್ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.
ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಗಂಭೀರ್ ಕೂಗಾಡಿದ್ದಾರೆ ಎಂದು ವರದಿಯಾಗಿದೆ. ನನಗೂ ನೋಡಿ ನೋಡಿ ಸಾಕಾಯ್ತು ಎಂದು ಗಂಭೀರ್ ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಟರ್ ಗಳು ಔಟಾದ ರೀತಿ ಗಂಭೀರ್ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಇನ್ನು ಮುಂದೆ ಈ ರೀತಿ ಮಾಡಿದರೆ ಮುಲಾಜಿಲ್ಲದೇ ತಂಡದಿಂದ ಕಿತ್ತು ಹಾಕಬೇಕಾಗುತ್ತದೆ ಎಂದೂ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.