ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ಧ ಫಾಲೋ ಆನ್ ಭೀತಿಯಲ್ಲಿದ್ದ ಟೀಂ ಇಂಡಿಯಾವನ್ನು ಕಾಪಾಡಿದ ಯುವ ಬ್ಯಾಟಿಗ ನಿತೀಶ್ ಕುಮಾರ್ ರೆಡ್ಡಿ ಅರ್ಧಶತಕ ಸಿಡಿಸಿ ಪುಷ್ಪ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡಿದ್ದಾರೆ.
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 474 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನಿನ್ನೆ 165 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಿತೀಶ್ ಕುಮಾರ್ ರೆಡ್ಡಿ ಮತ್ತೊಂದು ನಿರ್ಭೀತ ಇನಿಂಗ್ಸ್ ಮೂಲಕ ಆಪತ್ ಬಾಂಧವರಾದರು. ಈ ಸರಣಿಯುದ್ಧಕ್ಕೂ ಅನುಭವಿ ಬ್ಯಾಟಿಗರೂ ನಾಚುವಂತೆ ಬ್ಯಾಟ್ ಮಾಡುತ್ತಿರುವ ನಿತೀಶ್ ಕುಮಾರ್ ಇಂದು 85 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಚೊಚ್ಚಲ ಶತಕದ ಹೊಸ್ತಿಲಲ್ಲಿದ್ದಾರೆ.
ಅರ್ಧಶತಕ ಸಿಡಿಸಿದ ಬಳಿಕ ಬ್ಯಾಟ್ ನ್ನು ಥೇಟ್ ಪುಷ್ಪ ಸ್ಟೈಲ್ ನಲ್ಲಿ ಗಡ್ಡಕ್ಕೆ ಸವರಿ ತಗ್ಗೋದೇ ಇಲ್ಲ ಎಂದು ಎದುರಾಳಿಗಳಿಗೆ ಸಂದೇಶ ನೀಡಿದ್ದಾರೆ. ನಿತೀಶ್ ಭರ್ಜರಿ ಇನಿಂಗ್ಸ್ ನಿಂದಾಗಿ ಭಾರತ ಫಾಲೋ ಆನ್ ಭೀತಿಯಿಂದ ಹೊರಬಂತು.
ಇತ್ತೀಚೆಗಿನ ವರದಿ ಬಂದಾಗ ಭಾರತ 7 ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿದೆ. ನಿನ್ನೆ ಅಜೇಯರಾಗುಳಿದಿದ್ದ ರಿಷಭ್ ಪಂತ್ 28, ರವೀಂದ್ರ ಜಡೇಜಾ 17 ರನ್ ಗಳಿಸಿ ಔಟಾದರು. ನಿತೀಶ್ ಗೆ ತಕ್ಕ ಸಾಥ್ ನೀಡುತ್ತಿರುವ ವಾಷಿಂಗ್ಟನ್ ಸುಂದರ್ 39 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.