ಮೆಲ್ಪೊರ್ನ್: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನ ಯುವ ಬ್ಯಾಟಿಗ ಸ್ಯಾಮ್ ಕೋನ್ ಸ್ಟಾಸ್ ಜೊತೆಗೆ ಗುದ್ದಾಡಿದ ವಿರಾಟ್ ಕೊಹ್ಲಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ಎದುರಾಗಿದೆ.
19 ವರ್ಷದ ಸ್ಯಾಮ್ ಗೆ ಇದು ಪದಾರ್ಪಣೆಯ ಪಂದ್ಯವಾಗಿತ್ತು. ಮೊದಲ ಪಂದ್ಯದಲ್ಲೇ ಅವರು ಅರ್ಧಶತಕ ಗಳಿಸಿ ಮಿಂಚಿದ್ದರು. ಒಬ್ಬ ದಿಗ್ಗಜ ಕ್ರಿಕೆಟಿಗನಾಗಿ ಕೊಹ್ಲಿ ಎದುರಾಳಿ ಆಟಗಾರನನ್ನು ಅಭಿನಂದಿಸಬಹುದಿತ್ತು. ಆದರೆ ಕೊಹ್ಲಿ ಬೇಕೆಂದೇ ಹೆಗಲು ತಾಗಿಸಿ ಕಿರಿಕ್ ತೆಗೆದರು.
ಈ ವಿಚಾರವೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಒಳಗಾಗಿದೆ. ಒಬ್ಬ ಪದಾರ್ಪಣೆ ಮಾಡಿದ ಯುವ ಕ್ರಿಕೆಟಿಗನ ಜೊತೆಗೆ ದಿಗ್ಗಜ ಎನಿಸಿಕೊಂಡ ಕೊಹ್ಲಿಯ ವರ್ತನೆ ಇದೇನಾ? ನೆಟ್ಟಗೆ ಫಾರ್ಮ್ ಕಂಡುಕೊಳ್ಳುವುದರ ಬಗ್ಗೆ ಯೋಚನೆ ಮಾಡುವುದು ಬಿಟ್ಟು ಮೈದಾನದಲ್ಲಿ ಇಂತಹ ಕಿರಿಕ್ ಗಳ ಬಗ್ಗೆಯೇ ಗಮನ ಕೊಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಮಾಜಿ ಕ್ರಿಕೆಟಿಗರಿಂದಲೂ ಕೊಹ್ಲಿ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮಾಜಿ ಕೋಚ್ ರವಿ ಶಾಸ್ತ್ರಿ ಕೂಡಾ ಕೊಹ್ಲಿ ವರ್ತನೆಯನ್ನು ಪ್ರಶ್ನಿಸಿದ್ದಾರೆ. ತಮ್ಮ ಫಾರ್ಮ್ ಕಂಡುಕೊಳ್ಳುವುದರ ಬಗ್ಗೆ ಗಮನ ಕೇಂದ್ರೀಕರಿಸುವ ಬದಲು ಕೊಹ್ಲಿ ಇಂತಹದ್ದರಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನು, ಕೊಹ್ಲಿ ವರ್ತನೆ ಐಸಿಸಿ ಕೆಂಗಣ್ಣಿಗೂ ಗುರಿಯಾಗಿದ್ದು ಶಿಸ್ತಿನ ಕ್ರಮ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ.