ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬ್ರಿಸ್ಬೇನ್‌ನಲ್ಲಿ ಇಂದು ಆರಂಭವಾಗಿದೆ. ಟಾಸ್ ಗೆದ್ದು ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೇ ಮೊದಲ ದಿನವೇ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಪರ್ತ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್ಗಳಿಂದ ಗೆಲುವು ಸಾಧಿಸಿದ್ದ ಭಾರತ ಎರಡನೇ ಟೆಸ್ಟ್ನಲ್ಲಿ ಮುಗ್ಗರಿಸಿತ್ತು. ಅಡಿಲೇಡ್ನ ಓವೇಲ್ ಮೈದಾನದಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯವಾಗಿ ಸೋಲನುಭವಿಸಿತು.
ಇದೀಗ ಭಾರತ ಮೂರನೇ ಟೆಸ್ಟ್ ಗೆದ್ದು ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಪಂದ್ಯ ಆರಂಭವಾಗಿ 13.2 ಓವರ್ಗಳು ಮುಕ್ತಾಯಗೊಳ್ಳುತ್ತಿದ್ದಂತೆ ಮಳೆ ಅಡ್ಡಿಯಾಗಿ ಪಂದ್ಯ ಅರ್ಧಕ್ಕೆ ನಿಂತಿತು.
4 ಗಂಟೆ ಕಾಲ ಕಳೆದರೂ ಮಳೆ ನಿಲ್ಲದ ಸೂಚನೆ ಸಿಗದ ಕಾರಣ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಏತನ್ಮಧ್ಯೆ 4 ದಿನಗಳ ಕಾಲ ಬ್ರಿಸ್ಬೆನ್ನಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಭಾರತಕ್ಕೆ ಆತಂಕ ಹೆಚ್ಚಾಗಿದೆ. ಒಂದು ವೇಳೆ ಈ ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡರೇ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತಕ್ಕೆ ಭಾರೀ ಹೊಡೆತ ಬೀಳಲಿದೆ.
ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ಸ್ ಅಂಕಪಟ್ಟಿಯಲ್ಲಿ, ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡ ಇದೆ. ಹರಿಣ ಪಡೆ 63.33 ಶೇಕಡವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ಆಸ್ಟ್ರೇಲಿಯಾ 60.71 ಮತ್ತು ಭಾರತ 57.29 ಶೇಕಡವಾರು ಅಂಕದೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.