ಸಿಡ್ನಿ: ಇಲ್ಲಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ 6 ವಿಕೆಟ್ಗಳಿಂದ ಭಾರತ ತಂಡ ಸೋತು ಸರಣಿಯನ್ನು ಕಳೆದುಕೊಂಡಿರುವುದು ಒಂದೆಡೆಯಾದರೆ, ಮತ್ತೊಂಡೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದಲೂ ಟೀಂ ಇಂಡಿಯಾ ಹೊರಬಿತ್ತು.
ಕೊನೆಯ ಟೆಸ್ಟ್‌ನಲ್ಲಿ ಆರು ವಿಕೆಟ್ ಗೆಲುವಿನೊಂದಿಗೆ ಕಾಂಗರೂ ಪಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ಆಗಿರುವ ಪ್ಯಾಟ್ ಕಮಿನ್ಸ್ ಪಡೆ ಫೈನಲ್ ಹಣಾಹಣಿಯಲ್ಲಿ ಈಗಾಗಲೇ ಅಂತಿಮ ಹಂತಕ್ಕೇರಿರುವ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಆಸ್ಟ್ರೇಲಿಯಾ ತಂಡ 2014-15ರಲ್ಲಿ ತವರಿನಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1ರಿಂದ ತನ್ನದಾಗಿಸಿಕೊಂಡಿತು. 10 ವರ್ಷಗಳ ಹಿಂದೆ ಆಸೀಸ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸಿತ್ತು. ಅಂದಿನಿಂದ, ಆಸ್ಟ್ರೇಲಿಯಾ ಕೈಗೊಂಡ ಎರಡು ವಿದೇಶ ಪ್ರವಾಸಗಳು ಸೇರಿದಂತೆ ಎರಡು ರಾಷ್ಟ್ರಗಳ ನಡುವೆ ಆಡಿದ ಎಲ್ಲಾ ನಾಲ್ಕು ಸರಣಿಗಳಲ್ಲೂ ಭಾರತವೇ ಗೆದ್ದು ಬೀಗಿತ್ತು.
ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ನಡೆದ ಪರ್ತ್ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಪ್ರತಿಷ್ಠಿತ ಸರಣಿಯನ್ನು ಆರಂಭಿಸಿದ್ದ ಭಾರತ ಬಳಿಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಎರಡು ಪಂದ್ಯ ಸೋತು, ಒಂದು ಮ್ಯಾಚ್ ಡ್ರಾ ಮಾಡಿಕೊಂಡಿತ್ತು. ಸಿಡ್ನಿ ಟೆಸ್ಟ್‌ನಲ್ಲಿ ಮರಳಿ ನಾಯಕನಾದ ಬುಮ್ರಾ ಗಾಯಗೊಂಡು ಬೌಲಿಂಗ್ ಮಾಡದಿರುವುದು ಭಾರತಕ್ಕೆ ಹಿನ್ನಡೆಯಾಯಿತು. ಆರಂಭಿಕ ಸೋಲಿನ ಬಳಿಕ ಸರಣಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ ಕಾಂಗರೂ ಪಡೆ, 3-1ರಿಂದ ಭಾರತವನ್ನು ಮಣಿಸಿತು.