ನವದೆಹಲಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಆಪ್ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 29 ಅಭ್ಯರ್ಥಿಗಳ ಹೆಸರು ಘೋಷಿಸಿದೆ.
ಎಎಪಿ ಈಗಾಗಲೇ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಇದುವರೆಗೆ 47 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಅದರ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದೆ.
ಕಾಲ್ಕಾಜಿಯಲ್ಲಿ ಮುಖ್ಯಮಂತ್ರಿ ಅತಿಶಿ ವಿರುದ್ಧ ಹಿರಿಯ ನಾಯಕ ರಮೇಶ್ ಬಿಧುರಿ, ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ವಿರುದ್ಧ ಮಾಜಿ ಸಂಸದ ಪರ್ವೇಶ ವರ್ಮಾ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ತನ್ನ ಗಾಂಧಿನಗರ ಶಾಸಕ ಅನಿಲ್ ಬಾಜ್‌ಪೇಯ್ ಅವರನ್ನು ಕೈಬಿಟ್ಟು ದೆಹಲಿಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿಗೆ ಟಿಕೆಟ್ ನೀಡಿದೆ. ಶೀಲಾ ದೀಕ್ಷಿತ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 2003 ರಿಂದ 2013ರ ವರೆಗೆ ಸಚಿವರಾಗಿದ್ದ ಲವ್ಲಿ ಕಳೆದ ವರ್ಷ ಬಿಜೆಪಿ ಸೇರಿದ್ದರು.
ಎಎಪಿ ಮಾಜಿ ಸಚಿವ, ಕೇಜ್ರಿವಾಲ್ ಆಪ್ತರಾಗಿದ್ದ ಕೈಲಾಶ್ ಗಹ್ಲೋಟ್ ಬಿಜೆಪಿಯಿಂದ ನಜಾಫ್‌ಗಢ್ ಬದಲಿಗೆ ಬಿಜ್ವಾಸನ್‌ನಿಂದ ಕಣಕ್ಕಿಳಿದಿದ್ದರೆ, ರಾಜ್ ಕುಮಾರ್ ಆನಂದ್ ಪಟೇಲ್ ನಗರದಿಂದ ಟಿಕೆಟ್ ಪಡೆದಿದ್ದಾರೆ. ಎಎಪಿಯಿಂದ ಬಿಜೆಪಿಗೆ ತೆರಳಿದ್ದ ಶಾಸಕ ಕರ್ತಾರ್ ಸಿಂಗ್ ತನ್ವಾರ್ ಅವರ ಛತ್ತರ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ವಿಪಕ್ಷದ ನಾಯಕ ವಿಜೇಂದರ್ ಗುಪ್ತಾ, ಓಂ ಪ್ರಕಾಶ್ ಶರ್ಮಾ, ಅಜಯ್ ಮಹಾವರ್ ಮತ್ತು ಜಿತೇಂದರ್ ಮಹಾಜನ್ ಸೇರಿದಂತೆ ಬಿಜೆಪಿಯ ಹಾಲಿ ಶಾಸಕರು ಕ್ರಮವಾಗಿ ರೋಹಿಣಿ, ವಿಶ್ವಾಸ್ ನಗರ, ಘೋಂಡಾ ಮತ್ತು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಮಾಳವೀಯಾ ನಗರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಮನೋಜ್ ಶೋಕೀನ್ ನಂಗ್ಲೋಯ್ ಜಾಟ್‌ನಿಂದ ಕಣಕ್ಕಿಳಿದಿದ್ದಾರೆ.