ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಕುರ್ಚಿ ಕದನದ ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದ ಮಲ್ಲಿಕಾರ್ಜುನ ಖರ್ಗೆ ಟ್ರೋಲ್ ಗೊಳಗಾಗಿದ್ದಾರೆ. ಹಾಗಿದ್ದರೆ ನೀವು ಯಾರು ಎಂದು ಪಬ್ಲಿಕ್ ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ. ಅಂದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖ್ಯಸ್ಥ. ಕರ್ನಾಟಕ ಕಾಂಗ್ರೆಸ್ ಕುರ್ಚಿ ಕದನ ಶಮನ ಮಾಡಲು ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆ ಬಂದು ತಮ್ಮ ನಿವಾಸದಲ್ಲಿ ಎರಡು ದಿನಗಳಿಂದ ಬೀಡುಬಿಟ್ಟಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಹಾಗೂ ಹಲವು ಪ್ರಮುಖ ನಾಯಕರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ನೀ ಕೊಡೆ ನಾಬಿಡೆ ಕದನ ಮಾತ್ರ ನಿಲ್ಲುತ್ತಿಲ್ಲ. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾಧ್ಯಮಗಳ ಮುಂದೆ ಅಸಹಾಯಕತೆ ಪ್ರದರ್ಶಿಸಿದ್ದಾರೆ. ನಾನೇನೂ ಹೇಳುವ ಸ್ಥಿತಿಯಲ್ಲಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್ ಗೊಳಗಾಗಿದೆ. ಖರ್ಗೆ ಜೀ ತಾವೇ ಪಕ್ಷದ ಮುಖ್ಯಸ್ಥ ಎನ್ನುವುದನ್ನು ಮರೆತಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಹಾಗಿದ್ದರೆ ನೀವು ಯಾರು? ನೀವು ಹೈಕಮಾಂಡ್ ಅಲ್ವಾ? ನೀವು ಕೇವಲ ಹೆಸರಿಗೆ ಮಾತ್ರ ಎಐಸಿಸಿ ಅಧ್ಯಕ್ಷ ಅನ್ನಿ ಎಂದು ಕಾಲೆಳೆದಿದ್ದಾರೆ.