Publish Date: Thu, 19 Feb 2026 (20:34 IST)
Updated Date: Thu, 19 Feb 2026 (20:36 IST)
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಉತ್ಪನ್ನವನ್ನು ಸೇವಿಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಸುದ್ದಿಗಳ ಬಗ್ಗೆ ಇದೀಗ ಕೆಎಂಎಫ್ ಸ್ಪಷ್ಟನೆ ನೀಡಿದೆ.
ನಂದಿನಿ ಬ್ರ್ಯಾಂಡ್ ಎಂದರೆ ಕರ್ನಾಟಕಕ್ಕೇ ಹೆಮ್ಮೆ. ಈ ಬ್ರ್ಯಾಂಡ್ ಎಂದರೆ ಜನ ಕಣ್ಣು ಮುಚ್ಚಿಕೊಂಡು ಸುರಕ್ಷಿತ ಎಂದುಕೊಳ್ಳುತ್ತಾರೆ. ಹಾಲಿನಿಂದ ಹಿಡಿದು ಈಗ ವಿವಿಧ ಉತ್ಪನ್ನಗಳು ಬಿಡುಗಡೆಯಾಗುತ್ತಿರುವ ಕಾರಣ ನಂದಿನಿ ಮತ್ತಷ್ಟು ಜನಪ್ರಿಯವಾಗಿದೆ.
ಇಂತಹ ಹೊತ್ತಿನಲ್ಲೇ ನಂದಿನಿ ಉತ್ಪನ್ನ ಸೇವಿಸುವುದರಿಂದ ಕ್ಯಾನ್ಸರ್ ಬರಬಹುದು. ಈ ಉತ್ಪನ್ನಗಳಲ್ಲಿ ಬಳಸುವ ವಸ್ತುಗಳಿಂದ ಕ್ಯಾನ್ಸರ್ ಬರಬಹುದು ಎಂದು ಡಾ ಶರಣ್ಯ ಸಂತೋಷ್ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಅವರ ಹೇಳಿಕೆ ಭಾರೀ ವೈರಲ್ ಆಗಿತ್ತು. ಇದಕ್ಕೆ ಕೆಎಂಎಫ್ ಸ್ಪಷ್ಟನೆ ನೀಡಿದ್ದು ನಂದಿನಿ ಉತ್ಪನ್ನಗಳನ್ನು ನೈಸರ್ಗಿಕವಾಗಿ ತಯಾರು ಮಾಡಲಾಗುತ್ತದೆ. ಯಾವುದೇ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ. ಕ್ಯಾನ್ಸರ್ ಬರುತ್ತದೆ ಎಂಬುದೆಲ್ಲಾ ಶುದ್ಧ ಸುಳ್ಳು. ಇಂತಹ ಸುದ್ದಿ ಹರಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಹೇಳಿದೆ. ಆದರೆ ಇದಕ್ಕೆ ಸೆಡ್ಡು ಹೊಡೆದಿರುವ ಡಾ ಶರಣ್ಯ ಸಂತೋಷ್ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು ನನ್ನ ಮೇಲೆ ಕೇಸ್ ಹಾಕುವುದಾಗಿ ಕೆಎಂಎಫ್ ಎಚ್ಚರಿಕೆ ನೀಡಿದೆ. ಆದರೆ ನಾನು ಹೇಳಿದ್ದು ಸುಳ್ಳಲ್ಲ ಎಂದಿದ್ದಾರೆ.