ಬೆಂಗಳೂರು: ನಂದಿನಿ ತುಪ್ಪದ ಬೆಲೆ ಏರಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಮಾಧ್ಯಮಗಳು ಪ್ರಶ್ನಿಸಿದಾಗ ನೀನು ತುಪ್ಪ ತಿನ್ಬೇಡ ಸುಮ್ನಿರು ಎಂದಿದ್ದಾರೆ.
ನಂದಿನಿ ತುಪ್ಪದ ಬೆಲೆಯನ್ನು ಪ್ರತೀ ಲೀಟರ್ ಗೆ 90 ರೂ. ನಷ್ಟು ಏರಿಕೆ ಮಾಡಿ ಕೆಎಂಎಫ್ ಪ್ರಕಟಣೆ ನೀಡಿತ್ತು. ಇದರ ಬಗ್ಗೆ ಜನರು, ವಿಪಕ್ಷ ಬಿಜೆಪಿಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಏಕಾಏಕಿ ತುಪ್ಪದ ಬೆಲೆ ಏರಿಕೆ ಮಾಡಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿವೆ. ನಂದಿನಿ ತುಪ್ಪದ ಬೆಲೆ ಜಾಸ್ತಿ ಮಾಡಿದ್ದೀರಲ್ಲಾ ಸಾರ್ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಡಿಕೆ ಶಿವಕುಮಾರ್ ಅಯ್ಯೋ.. ಬಿಡ್ರೀ ರೈತರಿಗೆ ಒಳ್ಳೆದಾಗುತ್ತದೆ ಎಂದು ಜಾಸ್ತಿ ಮಾಡಿದ್ದಾರೆ. ನೀನು ತುಪ್ಪ ತಿನ್ಬೇಡ ಸುಮ್ನಿರು ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿ ಇಳಿಕೆ ಮಾಡಿದ್ದರಿಂದ ತುಪ್ಪದ ಬೆಲೆ ಇಳಿಕೆಯಾಗಿದೆ ಎಂದು ಖುಷಿಯಲ್ಲಿದ್ದ ಗ್ರಾಹಕರಿಗೆ ಈಗ ರಾಜ್ಯ ತುಪ್ಪದ ಬೆಲೆ ಹೆಚ್ಚಳ ಮಾಡಿರುವುದು ಗಂಟಲು ಸುಡುವಂತೆ ಮಾಡಿದೆ.