ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆಯಾಗುತ್ತಿರುವಾಗಲೇ ಇತ್ತ ಡಿಸಿಎಂ ಡಿಕೆ ಶಿವಕುಮಾರ್, ಸೋನಿಯಾಗಾಂಧಿಯವರು ಹಿಂದೆ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು. ಇನ್ನು ನಾನ್ಯಾವ ಲೆಕ್ಕ ಎಂಬ ಮಾತುಗಳನ್ನಾಡಿದ್ದಾರೆ.
ನವಂಬರ್ ನಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂಬ ಚರ್ಚೆಗಳ ನಡುವೆ ಡಿಕೆ ಶಿವಕುಮಾರ್ ತ್ಯಾಗದ ಮಾತು ಮಹತ್ವ ಪಡೆದುಕೊಂಡಿದೆ. ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ಸೋನಿಯಾ ಗಾಂಧಿಯವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಯುಪಿಎ ಒಕ್ಕೂಟದ ಬೆಂಬಲವೂ ಇತ್ತು. ಆದರೆ ಅವರು ಪ್ರಧಾನಿ ಹುದ್ದೆ ಮುಖ್ಯವಲ್ಲ ಎಂದರು. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ಬಿಟ್ಟುಕೊಟ್ಟರು. ಈ ದೇಶಕ್ಕೆ ಗಾಂಧಿ ಕುಟುಂಬದ ಕೊಡುಗೆ ದೊಡ್ಡದು ಎಂದಿದ್ದರು.
ಅಧಿಕಾರ ಹಂಚಿಕೆ ಚರ್ಚೆಗಳ ಬೆನ್ನಲ್ಲೇ ಡಿಕೆಶಿ ಇಂತಹದ್ದೊಂದು ಹೇಳಿಕೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಹೈಕಮಾಂಡ್ ನಿಂದ ಈ ಬಗ್ಗೆ ಸೂಚನೆ ಬಂದಿರಬಹುದೇ ಅಥವಾ ಪರೋಕ್ಷವಾಗಿ ಈ ಅವಧಿಯಲ್ಲಿ ಸಿಎಂ ಹುದ್ದೆಯ ಕನಸು ಕೈ ಬಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.