ಬೆಂಗಳೂರು: ನಂದಿನಿ ತುಪ್ಪದ ಬೆಲೆ ನಿನ್ನೆಯಷ್ಟೇ ಬರೋಬ್ಬರಿ 90 ರೂ. ಏರಿಕೆ ಮಾಡಿದ್ದ ಸರ್ಕಾರ ಈಗ ಹಾಲಿನ ದರ ಏರಿಕೆಗೆ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಜನ ಸೋಷಿಯಲ್ ಮೀಡಿಯಾದಲ್ಲಿ ಹಿಡಿಶಾಪ ಹಾಕುತ್ತಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿ ಇಳಿಕೆ ಮಾಡಿದ್ದರಿಂದ ನಂದಿನಿ ತುಪ್ಪದ ಬೆಲೆ ಇಳಿಕೆಯಾಗಿತ್ತು. ಆದರೆ ಇದರ ಫಲ ಜನರಿಗೆ ಸಿಗುವ ಮೊದಲೇ ಕೆಎಂಎಫ್ ತುಪ್ಪದ ಬೆಲೆಯನ್ನು ಪ್ರತೀ ಲೀಟರ್ ಗೆ 90 ರೂ. ಏರಿಕೆ ಮಾಡಿ ಜನರಿಗೆ ಬರೆ ಎಳೆದಿದೆ. ಇದರ ನಡುವೆ ಈಗ ಹಾಲಿನ ದರ ಏರಿಕೆಗೆ ಮುಂದಾಗಿದೆ.
ಈ ಬಗ್ಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ಸುಳಿವು ನೀಡಿದ್ದಾರೆ. ಪ್ರಸ್ತುತ ರೈತರಿಗೆ ನಾಲ್ಕು ರೂ. ಪ್ರೋತ್ಸಾಹ ಧನ ಹೋಗುತ್ತಿದೆ. ಇದರಿಂದ ಹಾಲು ಒಕ್ಕೂಟಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸಿಎಂಗೆ ಪ್ರಸ್ತಾಪವಿಡುವುದಾಗಿ ಹೇಳಿದ್ದಾರೆ.
ಈಗಾಗಲೇ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಿರುವ ಸರ್ಕಾರ ಹಾಲಿನ ದರ ಏರಿಕೆ ಮಾಡಲು ಮುಂದಾಗಿರುವ ಬೆನ್ನಲ್ಲೇ ಜನ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಹೀಗೇ ಮುಂದುವರಿದ್ರೆ ನಾವೂ ನಂದಿನಿಗೆ ಪರ್ಯಾಯ ಯಾವುದಿದೆ ಎಂದು ಹುಡುಕಬೇಕಾಗುತ್ತದೆ ಎಂದಿದ್ದಾರೆ.