Select Your Language

Notifications

webdunia
webdunia
webdunia
webdunia

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

BY Vijayendra

Krishnaveni K

ಬೆಳಗಾವಿ , ಬುಧವಾರ, 5 ನವೆಂಬರ್ 2025 (17:10 IST)
ಬೆಳಗಾವಿ: ಈ ನಾಡಿಗೆ ಅನ್ನವನ್ನು ಕೊಡುವ ಅನ್ನದಾತರ ಜೊತೆ ನನ್ನ 50 ನೇ ವರ್ಷದ ಜನ್ಮದಿನವನ್ನು ಆಚರಿಸುತ್ತಿರುವುದು ನನ್ನ ಜೀವನದಲ್ಲಿ ಮರೆಯಲಾರದ ಸುಸಂದರ್ಭ. ಇದೊಂದು ಸುದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಜಿಲ್ಲೆಯ ಗುರ್ಲಾಪುರ ಕ್ರಾಸ್ ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಇಂದು ಕೂಡ ವಿಜಯೇಂದ್ರ ಅವರು ಭಾಗವಹಿಸಿದ್ದರು. ಹೋರಾಟಗಾರರನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕೇ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಚಿವರು ಬಂದು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಬಾರದು ಎಂದು ಎಚ್ಚರಿಕೆ ನೀಡಿದರು. ಸಚಿವರು ಬಂದಾಗ ನಾನು ಇಲ್ಲಿ ಇರುವುದಿಲ್ಲ ಎಂದು ತಿಳಿಸಿದರು.

ತೂಕದಲ್ಲಿ, ರಿಕವರಿ ವಿಚಾರದಲ್ಲಿ ಕಬ್ಬು ಬೆಳೆಗಾರರಿಗೆ ಮೋಸ ಆಗುತ್ತಿದೆ. ರೈತರ ಕಣ್ಮುಂದೆಯೇ ಮೋಸ ಆಗುತ್ತಿದೆ. ಒಣ ಬಿಸಿಲಿನಲ್ಲಿ ಹೋರಾಟ ಮಾಡುತ್ತಿರುವ ರೈತರ ಸಮಸ್ಯೆಗೆ ಇತಿಶ್ರೀ ಆಗಬೇಕೆಂದು ಆಶಿಸಿದರು.
 
20 ಕಿಮೀ ದೂರದಲ್ಲಿರುವ ಉಸ್ತುವಾರಿ ಸಚಿವರು, 50 ಕಿಮೀ ದೂರದಲ್ಲಿರುವ ಸಕ್ಕರೆ ಸಚಿವರು ಕಬ್ಬು ಬೆಳೆಗಾರರ ಹೋರಾಟ ನೋಡಿ ತಕ್ಷಣ ಬಂದು ಅಹವಾಲು ಸ್ವೀಕರಿಸಿ ಸಮಸ್ಯೆಗೆ ಸ್ಪಂದಿಸಬಹುದೆಂದು ಕಾತರದಿಂದ ನೋಡುತ್ತಿದ್ದೆ. 6ನೇ ದಿನಕ್ಕೆ ಹೋರಾಟ ಕಾಲಿಟ್ಟರೂ ರಾಜ್ಯ ಸರಕಾರ ಗಮನ ಕೊಡಲಿಲ್ಲ; ಆಗ ನನ್ನ ಹೃದಯ ಚುರ್ ಗುಟ್ಟಿತು ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ರೈತರು ಸುಡು ಬಿಸಿಲನ್ನೂ ಲೆಕ್ಕಿಸದೇ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರಕಾರಕ್ಕೆ ಅವರ ಕೂಗು ಕೇಳಿಸಿಲ್ಲ; ಇದಕ್ಕೆ ರಾಜ್ಯ ಸರಕಾರಕ್ಕೆ ಅಧಿಕಾರದ ಮದ ಏರಿದ್ದೇ ಕಾರಣ ಎಂದು ನನಗೆ ಅನಿಸಿತು ಎಂದು ಆಕ್ಷೇಪಿಸಿದರು. ಹಾಗಾಗಿ ಒಂದು ಕ್ಷಣ ತಡ ಮಾಡದೇ, ಪಕ್ಷದ ಮುಖಂಡರ ಜೊತೆ ಚರ್ಚಿಸಿ ಇಲ್ಲಿಗೆ ಧಾವಿಸಿದೆ ಎಂದರು. ಹೋರಾಟದಲ್ಲಿ ಪಾಲ್ಗೊಂಡು ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.
 
ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ‘ನಮ್ಮ ರೈತರಿಗೆ ಬಡತನ ಇರಬಹುದು; ಆದರೂ ಹೃದಯ ಶ್ರೀಮಂತಿಕೆ ಇರುವವರಿದ್ದರೆ ಅದು ನಮ್ಮ ರೈತರದು’ ಎಂದು ಯಾವಾಗಲೂ ಹೇಳುತ್ತಾರೆ ಎಂದು ನೆನಪಿಸಿದರು.
 
ನಾನು ಈ ವೇದಿಕೆಗೆ ರಾಜಕಾರಣಿಯಾಗಿ, ಶಾಸಕನಾಗಿ ಹೋರಾಟಕ್ಕೆ ಕಾಲಿಟ್ಟಿಲ್ಲ; ನಾಡು ಕಂಡ ಧೀಮಂತ ಹೋರಾಟಗಾರ, ನಾಡು ಕಂಡ ಛಲಗಾರ, ಅಪ್ರತಿಮ ರೈತನಾಯಕ ಬಿ.ಎಸ್.ಯಡಿಯೂರಪ್ಪನವರ ಮಗನಾಗಿ ನಾನು ಇವತ್ತು ಈ ಹೋರಾಟಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಹೋರಾಟದ ಬಿಸಿ ರಾಜ್ಯ ಸರಕಾರಕ್ಕೆ ಮುಟ್ಟಿದೆ
ಮಾಧ್ಯಮಗಳ ನಿರಂತರ ಪ್ರಸಾರದ ಪರಿಣಾಮವಾಗಿ ನಿಮ್ಮ ಹೋರಾಟದ ಬಿಸಿ ರಾಜ್ಯ ಸರಕಾರಕ್ಕೆ ಮುಟ್ಟಿದೆ. ಬೆಳಗಾವಿ ಜಿಲ್ಲಾಧಿಕಾರಿ, ಸಚಿವರು, ಸಕ್ಕರೆ ಇಲಾಖೆ ಕಮೀಷನರ್ ಜೊತೆ ಚರ್ಚೆ ಮಾಡಿದ್ದೇನೆ. ಕಬ್ಬು ಬೆಳೆಗಾರರ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂಬ ಒಂದೇ ಮಾತು ಹೇಳಿದ್ದಾಗಿ ವಿವರಿಸಿದರು. ಮುಖ್ಯಮಂತ್ರಿಗಳಿಗೆ ಮಾತನಾಡಿ, ಹೋರಾಟದ ಕಿಚ್ಚು ಹರಡದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾಗಿ ಹೇಳಿದರು.
 
ಅಥಣಿ, ಚಿಕ್ಕೋಡಿ, ಬೈಲಹೊಂಗಲ ಮೊದಲಾದೆಡೆ ರಸ್ತೆ ತಡೆ, ಹೋರಾಟ ನಡೆದಿದೆ. ಮುಖ್ಯಮಂತ್ರಿಗಳೂ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿದ್ದಾರೆ. ಕಬ್ಬು ಬೆಳೆಗಾರರ ಹೋರಾಟ ನಾನು ತೆಗೆದುಕೊಂಡ ನಿರ್ಧಾರವಲ್ಲ; ಇದು ರೈತಸಂಘ, ಹಸಿರು ಸೇನೆಯ ಹೋರಾಟ; ಇದಕ್ಕೆ ನಾವು ಪ್ರಾಮಾಣಿಕ ಬೆಂಬಲ ಕೊಟ್ಟಿದ್ದೇವೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ