ಬೆಂಗಳೂರು: ಈ ದೇಶದ ಬಹುಸಂಖ್ಯಾತರು ಆರ್‌ಎಸ್‌ಎಸ್ ಅನ್ನು ಅಪ್ಪಿಕೊಂಡು ಇಲ್ಲ, ಒಪ್ಪಿಕೊಂಡು ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡವರೂ ಅಲ್ಲ, ಅತೀತರೂ ಅಲ್ಲ ಎನ್ನುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಮತ್ತೇ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. 'ಒಂದು ಎನ್‌ಜಿಒ ಮುಖ್ಯಸ್ಥರಿಗೆ ಅತಿ ಭದ್ರತೆಯ ಪ್ರೊಟೊಕಾಲ್ ಸೆಕ್ಯೂರಿಟಿ ನೀಡಿರುವುದೇಕೆ? ಒಂದೇ ಒಂದು ರೂಪಾಯಿ ತೆರಿಗೆ ನೀಡದ ಯಕಶ್ಚಿತ್ ಎನ್‌ಜಿಒ ಮುಖ್ಯಸ್ಥನಿಗೆ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವಂತಹ ಅನಿವಾರ್ಯ ಏನಿದೆ? ಇವರ ಕೈಯ್ಯಲ್ಲೇ ದೊಣ್ಣೆ, ಬಡಿಗೆಗಳು ಇರುವಾಗ ಹೆಚ್ಚಿನ ಭದ್ರತೆ ಯಾವ ಕಾರಣಕ್ಕೆ?' ಎಂದು ಕೇಳಿದ್ದಾರೆ.
'ನಾವು ಆರ್‌ಎಸ್‌ಎಸ್‌ನಿಂದ ಹೊಣೆಗಾರಿಕೆ ಕೇಳಿದರೆ ಮೈ ಮೇಲೆ ಚೇಳು ಬಿದ್ದವರಂತೆ ಆಡುವುದೇಕೆ?' ಎಂದು ವಾಗ್ದಾಳಿ ನಡೆಸಿದ್ದಾರೆ.
'ಈ ದೇಶದ ಬಹುಸಂಖ್ಯಾತರು ಆರ್‌ಎಸ್‌ಎಸ್ ಅನ್ನು ಅಪ್ಪಿಕೊಂಡು ಇಲ್ಲ, ಒಪ್ಪಿಕೊಂಡು ಇಲ್ಲ. ಇವರು ಈ ದೇಶಕ್ಕಿಂತ, ಸಂವಿಧಾನಕ್ಕಿಂತ, ಕಾನೂನಿಗಿಂತ ದೊಡ್ಡವರೂ ಅಲ್ಲ, ಅತೀತರೂ ಅಲ್ಲ' ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ NGOಗಳೆಲ್ಲವೂ ನೋಂದಣಿ ಮಾಡಿಸಿಕೊಂಡಿವೆ, ಪ್ರತಿ ವರ್ಷ ಐಟಿ ಫೈಲ್ ಮಾಡುತ್ತವೆ, ತಮ್ಮ ಆದಾಯ ಅಥವಾ ದೇಣಿಗೆಯ ಮಾಹಿತಿಗಳನ್ನು ಸರ್ಕಾರಕ್ಕೆ ತಿಳಿಸುತ್ತವೆ. ಆರ್‌ಎಸ್ಎಸ್ NGO ಆಗಿದ್ದರೆ ಈ ಪ್ರಕ್ರಿಯೆ ನಡೆಸದೆ ಇರುವುದೇಕೆ?