ಬೆಂಗಳೂರು: ತಮ್ಮ ಪಕ್ಷದಲ್ಲೇ ಬೇರೆಯವರಿಗೆ ನಾಯಕತ್ವ ವಹಿಸುವ ಅವಕಾಶ ಕೊಡದ ಗಾಂಧಿ ಕುಟುಂಬದ ರಾಹುಲ್ ಸೇನೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕರ್ನಾಟಕ ಬಿಜೆಪಿ ವ್ಯಂಗ್ಯ ಮಾಡಿದೆ.
ಭಾರತೀಯ ಸೇನೆಯಲ್ಲಿ ಬಹುತೇಕ ಉನ್ನತ ಹುದ್ದೆಗಳು ಶೇ.10 ರಷ್ಟಿರುವ ಜನರಿಂದಲೇ ನಿಯಂತ್ರಿಸಲ್ಪಡುತ್ತಿವೆ. ಇಲ್ಲಿ ಶೇ.90 ರಷ್ಟಿರುವ ಹಿಂದುಳಿದವರು, ಅತೀ ಹಿಂದುಳಿದವರಿಗೆ ಅವಕಾಶವಿಲ್ಲ ಎಂದು ರಾಹುಲ್ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ರಾಹುಲ್ ಗಾಂಧಿ ಕಾಲೆಳೆದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಒಂದು ರಾಷ್ಟ್ರೀಯ ಪಕ್ಷವನ್ನು ತನ್ನ ಕುಟುಂಬದ ಅಧೀನದಲ್ಲಿಟ್ಟುಕೊಂಡ ವಂಶದ ಕುಡಿ ಇಂದು ಭಾರತೀಯ ಸೇನೆಯಲ್ಲಿ ಮೀಸಲಾತಿ ತರುವ ಕುರಿತು ನಾಲಿಗೆ ಹರಿಯಬಿಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವಾಗ ಆಡಳಿತದಲ್ಲಿ ದಲಿತ ಮತ್ತು ಹಿಂದುಳಿದ ವರ್ಗವನ್ನು ಸಂಪೂರ್ಣ ಕಡೆಗಣಿಸಿತ್ತು. ಬಿಜೆಪಿ ಇಂದು ಒಬಿಸಿ ವರ್ಗಕ್ಕೆ, ದಲಿತರಿಗೆ ಉನ್ನತ ಸ್ಥಾನಮಾನವನ್ನು ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ್ತು ಹಿಂದುಳಿದವರು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಬೇಕಾಗಿದೆ.
ಇಂದು ಮಂದಬುದ್ಧಿಯ ಬಾಲಕ ರಾಹುಲ್ ಗಾಂಧಿ ಅವರು ಸಶಸ್ತ್ರ ಪಡೆಯಲ್ಲೂ ಜಾತಿ ಹುಡುಕಾಟ ನಡೆಸುವ ಮೂಲಕ ನೀಚ ಮಟ್ಟಕ್ಕೆ ಇಳಿದಿದ್ದಾರೆ. ಬ್ರಿಟಿಷರು ಅಂದು ಒಡೆದಾಳುವ ಸಲುವಾಗಿ ಅನುಸರಿಸಿದ ತಂತ್ರವನ್ನೇ ಇಂದು ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಈ ದೇಶದ ಭದ್ರತೆಗೆ ಎಂದಿಗೂ ಅಪಾಯಕಾರಿ ಎಂದು ಕಿಡಿ ಕಾರಿದೆ.