Publish Date: Thu, 19 Feb 2026 (18:14 IST)
Updated Date: Thu, 19 Feb 2026 (18:16 IST)
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಷ್ಕರಕ್ಕೆ ಕರೆ ನೀಡಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರ ಹಿಂಪಡೆದಿದ್ದಾರೆ. ಇದರಿಂದ ಸಾರಿಗೆ ಬಸ್ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.
ಇಂದು ಸಂಜೆ ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು ಚಲೋಗೆ ಕರೆ ಕೊಟ್ಟಿದ್ದ ನೌಕರರ ಸಂಘ ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿತ್ತು. ಮುಷ್ಕರದಲ್ಲಿ ನಾಲ್ಕೂ ಸಾರಿಗೆ ನಿಗಮದ ನೌಕರರು ಭಾಗಿಯಾಗಲಿದ್ದರು.
ಆದರೆ ನಿನ್ನೆ ರಾಜ್ಯ ಸರ್ಕಾರ 26 ತಿಂಗಳ ಹಿಂಬಾಕಿ ಪಾವತಿಸಿತ್ತು. ಹಾಗಿದ್ದರೂ 38 ತಿಂಗಳ ಹಿಂಬಾಕಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರು ಮುಷ್ಕರ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದರು. ಆದರೆ ಈಗ ಸರ್ಕಾರಕ್ಕೆ ಷರತ್ತು ವಿಧಿಸಿ ಮುಷ್ಕರ ಸದ್ಯಕ್ಕೆ ಹಿಂಪಡೆದಿದ್ದಾರೆ.
ಕೆಎಸ್ಆರ್ ಟಿಸಿ ಎಂಡಿ ಇಂದು ಮುಷ್ಕರ ನಡೆಸುತ್ತಿದ್ದ ನೌಕರರ ಬಳಿ ತೆರಳಿ ಸಂಧಾನ ಸಭೆ ನಡೆಸಿದ್ದಾರೆ. ಇದಾದ ಬಳಿಕ ತಮ್ಮ ಬೇಡಿಕೆ ಈಡೇರಿಸಲು ಡೆಡ್ ಲೈನ್ ನೀಡಿದ ನೌಕರರು ಸದ್ಯಕ್ಕೆ ಮುಷ್ಕರ ಹಿಂಪಡೆಯುವುದಾಗಿ ಹೇಳಿದ್ದಾರೆ. ಹೀಗಾಗಿ ನಾಳೆ ಯಥಾ ಪ್ರಕಾರ ಸಾರಿಗೆ ಬಸ್ ಗಳು ಸಂಚಾರ ನಡೆಸಲಿವೆ. ಇದರಿಂದ ಪ್ರಯಾಣಿಕರಿಗೂ ನೆಮ್ಮದಿಯಾಗಿದೆ.