Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ಶ್ರಮಿಸೋಣ: ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಗುರುವಾರ, 19 ಫೆಬ್ರವರಿ 2026 (14:32 IST)
ಬೆಂಗಳೂರು: ತೆಲಂಗಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ. ಕರ್ನಾಟಕದಲ್ಲಿ ಅಭಿವೃದ್ಧಿ ಶೂನ್ಯ ಸ್ಥಿತಿ ಇದ್ದು, ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.
 
ನಗರದ ಅರಮನೆ ಮೈದಾನದ ಗೇಟ್ ನಂ.4, ಗಾಯತ್ರಿ ಗ್ರ್ಯಾಂಡ್ ನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹಿಂದೂ ಕಾರ್ಯಕರ್ತರ, ದಲಿತರ ಹತ್ಯೆ ಆಗುತ್ತಿದೆ ಎಂದ ಅವರು, ಸುರತ್ಕಲ್, ಯಲ್ಲಾಪುರದಲ್ಲಿ ಆದ ಹತ್ಯೆಯನ್ನು ಉಲ್ಲೇಖಿಸಿದರು. ಯಲ್ಲಾಪುರದ ದಲಿತ ಮಹಿಳೆ ಹತ್ಯೆ, ಕೊಪ್ಪಳದಲ್ಲಿ ದಲಿತ ವ್ಯಕ್ತಿಯ ಹತ್ಯೆ ಆದರೂ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು.
 
ಈ ಸರಕಾರ ಬಂದ ಬಳಿಕ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾವೇರಿ ನದಿಯ ಉಗಮಸ್ಥಾನ ಮೈಸೂರು ಮಾದಕವಸ್ತುಗಳಿಗೆ ಉಗಮ ಸ್ಥಾನವಾಗಿದೆ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ದಸರಾ ಸಂದರ್ಭದಲ್ಲಿ ಬಲೂನ್ ಮಾರಾಟ ಮಾಡುವ ವ್ಯಕ್ತಿಯ ಕುಟುಂಬದ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ- ಕೊಲೆ ನಡೆದಿದೆ ಎಂದು ನೆನಪಿಸಿದರು.
 
ರಾಜ್ಯ ಸರಕಾರದ ಚಳಿ ಬಿಡಿಸುವ ಕೆಲಸವನ್ನು ವಿಪಕ್ಷವಾದ ಬಿಜೆಪಿ ರಾಜ್ಯ ಘಟಕ ಮಾಡುತ್ತಲೇ ಬಂದಿದೆ. ಮುಂದಿನ ದಿನಗಳದ್ದು ಅನೇಕ ಚುನಾವಣೆಗಳ ದಿನಗಳು. ಕಾರ್ಯಕರ್ತರ ಚುನಾವಣೆ ಮುಂದೆ ಬರಲಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಜಿಬಿಎ ಚುನಾವಣೆಯೂ ಬರಲಿದೆ. ಈ ನಡುವೆ ವಿಧಾನಸಭೆಯ ಎರಡು ಉಪ ಚುನಾವಣೆಗಳು ಬರಲಿದೆ. ಬಾಗೇಪಲ್ಲಿ ಉಪ ಚುನಾವಣೆಯೂ ಇದ್ದು, ಸರಣಿ ಚುನಾವಣೆಗಳು ಮುಂದಿನ ಆರೇಳು ತಿಂಗಳು ನಡೆಯಲಿವೆ ಎಂದು ತಿಳಿಸಿದರು.
 
2028ರ ಚುನಾವಣೆಗೆ ಬಹಳ ದೂರ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ನಾವು ಹಗಲು- ರಾತ್ರಿ ಶ್ರಮ ಹಾಕಬೇಕೆಂದು ವಿನಂತಿಸಿದರು. ಕರ್ನಾಟಕವು ದಕ್ಷಿಣ ಭಾರತದ ಹೆಬ್ಬಾಗಿಲು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಫಲಿತಾಂಶ ತರಬೇಕೆಂದು ತಿಳಿಸಿದರು. ಅಹಿಂದ ಹೆಸರು ಹೇಳಿಕೊಂಡು ರಾಜ್ಯದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯರ ಸರಕಾರವು ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಎಲ್ಲ ಹಿಂದುಳಿದ ಸಮುದಾಯಗಳನ್ನು, ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆಯನ್ನು ಸಂಪೂರ್ಣವಾಗಿ ಮರೆತಿದೆ ಎಂದು ಟೀಕಿಸಿದರು. 
 
ಬಿಜೆಪಿ ಜಗತ್ತಿನಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ನಾಯಕತ್ವ ಹೊಂದಿದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿಶ್ವಗುರುವಾಗುವ ಸಂಕಲ್ಪದೊಂದಿಗೆ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು. ಸ್ವರಾಜ್ಯದ ಕನಸು ಬಿತ್ತಿದ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನೂ ಇವತ್ತು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಇಂಥ ದೊಡ್ಡ ಪಕ್ಷದ ನೇತೃತ್ವವನ್ನು ಯುವಕ ನಿತಿನ್ ನಬೀನ್ ಜೀ ಅವರಿಗೆ ನೀಡಿದ್ದು, ಯುವಶಕ್ತಿಗೆ ಹೆಮ್ಮೆಯ ವಿಚಾರ ಎಂದರು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ 2047ನೇ ಇಸವಿಗೆ ವಿಕಸಿತ ಭಾರತ ಸಂಕಲ್ಪಕ್ಕೆ ಪೂರಕ ಎಂದು ತಿಳಿಸಿದರು.
 
ಭಾರತವನ್ನು ಯುಪಿಎ ಸರಕಾರ ಇದ್ದಾಗ ಆರ್ಥಿಕವಾಗಿ ಗುರುತಿಸುತ್ತಿರಲಿಲ್ಲ. ಅಂಥ ಭಾರತವು ಇದೀಗ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದಕ್ಕೆ ಮೋದಿಜೀ ಅವರ ದಿಟ್ಟ ನಾಯಕತ್ವ ಕಾರಣ ಎಂದು ವಿವರಿಸಿದರು. ವಿದೇಶಾಂಗ ನೀತಿ, ರಾಜತಾಂತ್ರಿಕ ನಡೆಯ ಪರಿಣಾಮವಾಗಿ ಯುರೋಪ್ ಒಕ್ಕೂಟವು ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ ಕೂಡ ಭಾರತದ ಜೊತೆಗಿನ ಸಂಬಂಧ ಉತ್ತಮ ಪಡಿಸಲು ತೆರಿಗೆ ಪ್ರಮಾಣವನ್ನು ಇಳಿಸಿದೆ ಎಂದು ವಿಶ್ಲೇಷಿಸಿದರು. ಮೋದಿಜೀ ಅವರಿಗೆ 25ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಗೌರವ ನೀಡಿವೆ. ಇದು ಮೋದಿಜೀ ಅವರ ನಾಯಕತ್ವಕ್ಕೆ ಸಿಕ್ಕಿದ ಗೌರವ ಎಂದರು. 
 
ದೇಶದ ಚುನಾವಣಾ ಆಯೋಗವು ಎಸ್‍ಐಆರ್ (ವಿಶೇಷ ಮತಪಟ್ಟಿ ಪರಿಷ್ಕರಣೆ) ಮಾಡುತ್ತಿದೆ. ರಾÀಜ್ಯದಲ್ಲೂ ಬರಲಿರುವ ಎಸ್‍ಐಆರ್ ಸಂಬಂಧ ಜಾಗ್ರತೆ ವಹಿಸಲು ಸಲಹೆ ನೀಡಿದರು. ವಿಬಿ ಜಿ ರಾಮ್ ಜಿ ಮೂಲಕ ಭ್ರಷ್ಟಾಚಾರ ತೊಡೆದುಹಾಕಲು ಬಡವರಿಗೆ ಅನುಕೂಲ ತರಲು ಸರಕಾರ ಮುಂದಾಗಿದೆ. ಆದರೆ, ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದೆ ಹಾಗೂ ಹಳೆಯ ಚಾಳಿಯನ್ನು ಮುಂದುವರೆಸಿದೆ ಎಂದು ಆಕ್ಷೇಪಿಸಿದರು. ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಗೆಲುವು, ಸ್ಥಳೀಯ ಚುನಾವಣೆಯಲ್ಲೂ ಬಿಜೆಪಿ ಜಯಭೇರಿಯು ಇಡೀ ದೇಶದ ಕಾರ್ಯಕರ್ತರು ಸಂಭ್ರಮಿಸಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಕೇವಲ ಎಐ ಭಾಗವಲ್ಲ, ಮುನ್ನಡೆಸಿಕೊಂಡು ಹೋಗುತ್ತಿದೆ: ಪ್ರಧಾನಿ ಮೋದಿ