ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬೆಲೆಯೇರಿಕೆಯ ಬಾದ್ ಷಾ ಎಂದು ಬಿಜೆಪಿ ಕಟು ಟೀಕೆ ನಡೆಸಿದೆ. ನಂದಿನಿ ತುಪ್ಪದ ಬೆಲೆ ಏರಿಕೆ ಬೆನ್ನಲ್ಲೇ ಬಿಜೆಪಿ ಈ ಟೀಕೆ ಮಾಡಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆಯೇರಿಕೆ ಮಾಡುತ್ತಲೇ ಇದೆ. ಇದರ ಬಗ್ಗೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ಕನ್ನಡಿಗರಿಗೆ ಕೇಂದ್ರದ ಜಿಎಸ್ ಟಿ ಇಳಿಕೆಯ ಖುಷಿ ನೀಡಲೂ ಸಿದ್ದು ಸರ್ಕಾರ ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದೆ.
ಪಿಎಂ ನರೇಂದ್ರ ಮೋದಿ ಅವರ ಸರ್ಕಾರ GST ಕಡಿಮೆಗೊಳಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಟ್ಟಿದ್ದರೂ ಲೂಟಿಕೋರ ಕಾಂಗ್ರೆಸ್ ಸರ್ಕಾರ ಮಾತ್ರ ನಂದಿನಿ ತುಪ್ಪದ ಬೆಲೆಯನ್ನು 1 ಕೆ.ಜಿ.ಗೆ 90 ರೂ. ಹೆಚ್ಚಿಸಿ ಹಗಲು ದರೋಡೆ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರ 2.5 ವರ್ಷದಲ್ಲಿ ಮಾಡಿದ ಬೆಲೆ ಏರಿಕೆಗಳಿಗೆ ಲೆಕ್ಕವೇ ಇಲ್ಲ, ನಿರಂತರ ಬೆಲೆ ಏರಿಕೆಗೆ ಕರುನಾಡ ಜನರು ನಿತ್ಯ ಬೆಂದು ಹೋಗುತ್ತಿದ್ದಾರೆ. ಕನ್ನಡಿಗರ ತೆರಿಗೆ ಹಣ ಲೂಟಿ ಮಾಡುವುದು, ಬೆಲೆ ಹೆಚ್ಚಿಸುವುದು ಸಿದ್ದರಾಮಯ್ಯ ಸರ್ಕಾರದ ನಿತ್ಯ ಕಾಯಕ ಎಂದು ಬಿಜೆಪಿ ಟೀಕೆ ನಡೆಸಿದೆ.