ಬೆಂಗಳೂರು: ಜನಗಣಮನ ಗೀತೆ ರಚಿಸಿದ್ದು ಬ್ರಿಟಿಷರಿಗಾಗಿ ಎಂದು ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಇದು ಆರ್ ಎಸ್ಎಸ್ ಪ್ರಭಾವದ ಪರಿಣಾಮ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ವಿಶ್ವೇಶ್ವರ ಹೆಗಡೆ ಕಾಗೇರಿ, ಜನಗಣಮನ ಗೀತೆಯನ್ನು ಬ್ರಿಟಿಷರನ್ನು ಹೊಗಳುವುದಕ್ಕಾಗಿ ಬರೆದಿದ್ದು. ಇತಿಹಾಸ ಗಮನಿಸಿದರೆ ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎಂದು ಒತ್ತಾಯವಿತ್ತು. ಅದಾಗ್ಯೂ ನಮ್ಮ ಪೂರ್ವಜರು ವಂದೇ ಮಾತರಂ ಜೊತೆಗೆ ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ್ದ ಜನಗಣಮನ ಗೀತೆಯನ್ನು ಸೇರಿಸಬೇಕು ಎಂದು ನಿರ್ಧರಿಸಿದರು. ಅದರಂತೆ ಸ್ವೀಕರಿಸಿದ್ದೇವೆ ಎಂದಿದ್ದರು.
ಅವರ ಭಾಷಣದ ವಿಡಿಯೋ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಇದು ಆರ್ ಎಸ್ಎಸ್ ಪ್ರಭಾವ ಎಂದಿದ್ದಾರೆ. ಕಾಗೇರಿ ಹೇಳಿರುವುದು ಅಸಂಬದ್ಧ ಮತ್ತು ವ್ಯಾಟ್ಸಪ್ ಇತಿಹಾಸ ಪಾಠ. ರವೀಂದ್ರ ನಾಥ ಠಾಗೋರರು 1911 ರಲ್ಲಿ ಭರೋತೋ ಭಾಗ್ಯೋ ಬಿಧಾತ ಎಂಬ ಸ್ತುತಿಗೀತೆಯನ್ನು ಬರೆದರು. ಇದನ್ನು ಮೊದಲ ಬಾರಿಗೆ 1911 ರ ಕೋಲ್ಕತ್ತಾ ಕಾಂಗ್ರೆಸ್ ಸಮಾವೇಶದಲ್ಲಿ ಹಾಡಲಾಯಿತು. ಇದು ಯಾವುದೋ ರಾಜ ಗೌರವಕ್ಕಾಗಿ ಬರೆದ ಹಾಡಲ್ಲ. ತ್ರಿವರ್ಣ ಧ್ವಜ, ರಾಷ್ಟ್ರಗೀತೆಯನ್ನು ಅಗೌರವಿಸುವ ಪರಂಪರೆಯನ್ನು ಆರ್ ಎಸ್ಎಸ್ ಹೊಂದಿದೆ ಎಂದು ಕಿಡಿ ಕಾರಿದ್ದಾರೆ.