ಬೆಂಗಳೂರು: ಆರ್ ಎಸ್ಎಸ್ ನೋಂದಣಿ ಮಾಡಿಕೊಂಡಿಲ್ಲ, ಅದಕ್ಕೆ ಡೊನೇಷನ್ ಯಾರು ಕೊಡ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರು ಹಾಗಿದ್ದರೆ ರಾಜಕೀಯ ಪಕ್ಷಗಳಿಗೆ ಯಾರೆಲ್ಲಾ ಡೊನೇಷನ್ ಕೊಡ್ತಿದ್ದಾರೆ ಹೇಳಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಆರ್ ಎಸ್ಎಸ್ ವಿರುದ್ಧ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿರುವ ಪ್ರಿಯಾಂಕ್ ಖರ್ಗೆ, ಒಂದು ವೇಳೆ ಸಂಘ ನ್ಯಾಯಯುತವಾಗಿದ್ದರೆ ನೋಂದಣಿ ಮಾಡಿಸಿಕೊಳ್ಳಲಿ. ಇತರೆ ಎನ್ ಜಿಒಗಳಂತೆ ನೋಂದಣಿ ಮಾಡಿಕೊಂಡು ಕಾನೂನು ರೀತ್ಯಾ ಮಾಡಲಿ. ಅಷ್ಟಕ್ಕೂ ಇದಕ್ಕೆ ಅಷ್ಟೊಂದು ಡೊನೇಷನ್ ಕೊಡ್ತಿರೋರು ಯಾರು ಎಂದು ಬಹಿರಂಗಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನೋಂದಣಿ ಮಾಡಿಸಿಕೊಳ್ಳದೇ ಇರುವುದು ಅಪರಾಧವಲ್ಲ. ನೋಂದಣಿ ಮಾಡಿಸಿಕೊಂಡಿಲ್ಲ ಎಂದರೆ ಅಕ್ರಮ ಸಂಸ್ಥೆ ಎಂದರ್ಥವಲ್ಲ. ಅದಕ್ಕೆ ದೇಣಿಗೆ ನೀಡುತ್ತಿರುವವರೂ ಅದರ ನೂರಾರು ಸ್ವಯಂ ಸೇವಕರೇ ಎಂದು ಒಬ್ಬರು ತಿರುಗೇಟು ನೀಡಿದ್ದಾರೆ.
ಇನ್ನೊಬ್ಬರು ಹಾಗಿದ್ದರೆ ರಾಜಕೀಯ ಪಕ್ಷಗಳಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಯಾರು ದೇಣಿಗೆ ಕೊಡ್ತಿದ್ದಾರೆ ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ. ನೀವೊಬ್ಬ ಐಟಿ, ಬಿಟಿ ಸಚಿವ ನಿಮಗೆ ನಿಮ್ಮದೇ ಸಚಿವಾಲಯದ ಕೆಲಸಗಳಿಲ್ಲವೇ? ಯಾವಾಗಲೂ ಆರ್ ಎಸ್ಎಸ್ ವಿರುದ್ಧವೇ ಮಾತನಾಡುತ್ತಿರುತ್ತೀರಿ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ.