ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಇದೇ ರೀತಿಯ ವಾತಾವರಣ ಇರಲಿದೆ.
ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಉಂಟಾಗಿದ್ದ ಸೈಕ್ಲೋನ್, ವಾಯುಭಾರ ಕುಸಿತದ ಪ್ರಭಾವ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಹಿಂಗಾರಿನ ಬಿರುಸು ಇಳಿಕೆಯಾಗಿದೆ. ತಾಪಮಾನ ಪ್ರಮಾಣ ಏರಿಕೆ ಆಗುತ್ತಿದೆ. ನವೆಂಬರ್ 5ರಿಂದ ಮತ್ತೆ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿದ್ದ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸೈಕ್ಲೋನ್ ಮೋಂತಾ ಅಬ್ಬರ ಕಡಿಮೆಯಾಗಿರುವ ಕಾರಣ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮರೆಯಾಗಿದ್ದು ಒಣಹವೆ ಕಂಡುಬರುತ್ತಿದೆ.
ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುತೇಕ ಶುಭ್ರ ಆಕಾಶ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಸೆಲ್ಸಿಯಸ್ ಮತ್ತು 19 ಸೆಲ್ಸಿಯಸ್ ಇರುವ ಸಾಧ್ಯತೆ ಇದೆ.
ನವೆಂಬರ್ 4 ಮತ್ತು 5ರಿಂದ ಎರಡು ದಿನ ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮತ್ತೆ ಹಗುರ ಮಳೆ ಸುರಿಯಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಲಿದೆ.