ಬೆಂಗಳೂರು: ಸುಳ್ಳು ಕತೆ ಕಟ್ಟಿ ಕನ್ನಡಿಗನನ್ನೇ ಅಪರಾಧಿ ಮಾಡಲು ಹೊರಟ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಗೆ ಈಗ ಪೊಲೀಸರೇ ಪಾಠ ಕಲಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಸಿವಿ ರಾಮನ್ ನಗರದಲ್ಲಿ ನಿನ್ನೆ ಓರ್ವ ಸ್ವಿಗಿ ಡೆಲಿವರಿ ಯುವಕನೊಂದಿಗೆ ಕಿತ್ತಾಟವಾಡಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ರಕ್ತ ಸಿಕ್ತ ಮುಖದೊಂದಿಗೆ ವಿಡಿಯೋ ಮಾಡಿದ್ದ ವಿಂಗ್ ಕಮಾಂಡರ್ ಬೋಸ್, ಕನ್ನಡ ಮಾತನಾಡಿಲ್ಲ ಎಂದು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಕತೆ ಕಟ್ಟಿದ್ದರು. ಇದಾದ ಬೆನ್ನಲ್ಲೇ ಸ್ವಿಗಿ ಡೆಲಿವರಿ ಬಾಯ್ ಮೇಲೆ ಪ್ರಕರಣ ದಾಖಲಾಗಿತ್ತು.
ಆದರೆ ಕೆಲ ಹೊತ್ತಿನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನಿಜವಾಗಿ ಬೋಸ್ ಅವರೇ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಬೋಸ್ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು. ಆತನ ಕುತ್ತಿಗೆ ಹಿಡಿದು ರಸ್ತೆಗೆ ತಳ್ಳಿ ಮಾರಣಾಂತಿಕ ಹಲ್ಲೆ ನಡೆಸಿದ್ದ ದೃಶ್ಯ ಬಯಲಾಗಿತ್ತು.
ಇದರಿಂದಾಗಿ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತು. ಹಲ್ಲೆಗೊಳಗಾದ ವಿಕಾಸ್ ಎಂಬ ಯುವಕ ಪೊಲೀಸರಿಗೆ ದೂರು ನೀಡಿದ್ದ. ಇದರ ಆಧಾರದಲ್ಲಿ ಪೊಲೀಸರು ಈಗ ಸುಳ್ಳು ಕತೆ ಕಟ್ಟಿದ್ದ ವಿಂಗ್ ಕಮಾಂಡರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏನೋ ಮಾಡಲು ಹೋಗಿ ಕನ್ನಡವನ್ನು ಮಧ್ಯೆ ಎಳೆದು ತಂದ ವಿಂಗ್ ಕಮಾಂಡರ್ ಗೆ ಈಗ ತನ್ನ ಬುಡಕ್ಕೇ ಬೆಂಕಿ ಬಿದ್ದಂತಾಗಿದೆ.