ಬೆಂಗಳೂರು: ಮೊನ್ನೆಯಷ್ಟೇ ಹಿಂದಿ ಭಾಷಿಕನೊಬ್ಬ ಕನ್ನಡಿಗ ಕ್ಯಾಬ್ ಚಾಲಕನೊಂದಿಗೆ ಕಿರಿಕ್ ಮಾಡಿದ್ದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಬೆಂಗಳೂರಿನಲ್ಲಿ ವಾಯಪಡೆ ಅಧಿಕಾರಿಯೊಬ್ಬರ ಮೇಲೆ ಕನ್ನಡಿಗನೊಬ್ಬ ಹಲ್ಲೆ ಮಾಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದೆ. ಆದರೆ ಈ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ವಾಯುಪಡೆ ಸಿಬ್ಬಂದಿಯಾಗಿರುವ ಬೋಸ್ ಮತ್ತು ಅವರ ಪತ್ನಿ ಮಧುಮಿತಾ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದ ವ್ಯಕ್ತಿ ಅಡ್ಡಗಟ್ಟಿ ಮನಬಂದಂತೆ ಥಳಿಸಿದ್ದಾನೆ ಎಂದು ಅವರೇ ರಕ್ತ ಸಿಕ್ತ ಮುಖದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪ್ರಕಟಿಸಿದ್ದರು.
ಇದರ ಬೆನ್ನಲ್ಲೇ ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ಕೆಲವರು ಬೆಂಗಳೂರು ಪರಭಾಷಿಕರಿಗೆ ಸೇಫ್ ಅಲ್ಲ, ಇಲ್ಲಿ ಹೊರಗಿನವರನ್ನು ಈ ರೀತಿ ಟ್ರೀಟ್ ಮಾಡಲಾಗುತ್ತಿದೆ ಎಂದು ಕೆಲವರು ಟ್ರೆಂಡ್ ಶುರು ಮಾಡಿದರು. ಇದರ ನಡುವೆ ಈಗ ಕೆಲವರು ಮತ್ತೊಂದು ವಿಡಿಯೋ ಹರಿಯಬಿಟ್ಟಿದ್ದು, ಇದರಲ್ಲಿ ಬೋಸ್ ಅವರೇ ಗಿಗಾ ವರ್ಕರ್ ಮೇಲೆ ನಡುರಸ್ತೆಯಲ್ಲಿ ಎಳೆದಾಡಿ ಮನಬಂದಂತೆ ಹಲ್ಲೆ ನಡೆಸುತ್ತಿರುವ ದೃಶ್ಯವಿದೆ. ಕೆಲವು ಕನ್ನಡಿಗರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಬೆಂಗಳೂರು ಕನ್ನಡಿಗರೇ ಸೇಫ್ ಅಲ್ಲದಂತಾಗಿದೆ ಎಂದಿದ್ದಾರೆ. ಇದರಲ್ಲಿ ಸತ್ಯ ಯಾವುದು ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.