ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪರಭಾಷಿಕರ ಹಾವಳಿ ಬಗ್ಗೆ ಆಗಾಗ ವರದಿಗಳನ್ನು ಓದುತ್ತಿರುತ್ತೇವೆ. ಮೊನ್ನೆಯಷ್ಟೇ ಹಿಂದವಾಲನೊಬ್ಬ ಕನ್ನಡಿಗ ಕ್ಯಾಬ್ ಚಾಲಕನಿಗೆ ಇಲ್ಲಿ ಬದುಕಬೇಕಾದರೆ ಹಿಂದಿ ಕಲಿ ಎಂದು ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಇಂದು ಆತನ ವರಸೆಯೇ ಬದಲಾಗಿದೆ. ಹೊಸ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರಿನಲ್ಲಿ ತಡರಾತ್ರಿ ಹಿಂದಿವಾಲನೊಬ್ಬ ಕ್ಯಾಬ್ ಚಾಲಕನಿಗೆ ಬೆಂಗಳೂರಿನಲ್ಲಿ ಬದುಕಬೇಕೆಂದರೆ ಹಿಂದಿ ಕಲಿ ಎಂದು ಹಿಂದಿಯಲ್ಲೇ ಆವಾಜ್ ಹಾಕಿದ್ದ. ಇದಕ್ಕೆ ಕ್ಯಾಬ್ ಚಾಲಕ ಕೂಡಾ ನೀನಿರೋದು ಬೆಂಗಳೂರಲ್ಲಿ. ಕನ್ನಡ ಮಾತನಾಡು ಮೊದಲು ಎಂದು ತಿರುಗೇಟು ನೀಡಿದ್ದ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಿಂದಿ ಭಾಷಿಕನ ದೌಲತ್ತಿನ ವರ್ತನೆ ಬಗ್ಗೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತ ಹೊಸದೊಂದು ವಿಡಿಯೋ ಹರಿಯಬಿಟ್ಟಿದ್ದು ಇದರಲ್ಲಿ ಆತನ ವರಸೆಯೇ ಬದಲಾಗಿದೆ.
ತನ್ನ ವರ್ತನೆಗೆ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೇ ವರಸೆ ಬದಲಿಸಿದ ಹಿಂದಿವಾಲ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ್ದಾನೆ. ನನಗೆ ಈ ನಗರ ಜೀವನ ಕೊಟ್ಟಿದೆ, ಬದುಕು ಕೊಟ್ಟಿದೆ. ನಾನು ಹಾಗೆ ಮಾತನಾಡಬಾರದಿತ್ತು. ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.