ಬೆಂಗಳೂರು: ಬೆಂಗಳೂರಿನಲ್ಲಿ ನಡೆದಾಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿತ್ತು. ಇದೀಗ ಕೊನೆಗೂ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊನ್ನೆಯಷ್ಟೇ ತನ್ನ ಗೆಳತಿಯ ಜೊತೆ ತಡರಾತ್ರಿ ಗಲ್ಲಿ ರಸ್ತೆಯೊಂದರಲ್ಲಿ ನಡೆದಾಡಿಕೊಂಡು ಬರುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಯುವಕ ಖಾಸಗಿ ಭಾಗವನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಭಾರೀ ಸುದ್ದಿಯಾಗಿತ್ತು. ಈ ಘಟನೆಯ ಸಿಸಿಟಿವಿ ವಿಡಿಯೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಘಟನೆ ಬಗ್ಗೆ ಗೃಹಸಚಿವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಇಂತಹದ್ದೆಲ್ಲಾ ದೊಡ್ಡ ನಗರಗಳಲ್ಲಿ ನಡೆಯುತ್ತಿರುತ್ತವೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು. ಆದರೆ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಹಿಡಿಯುವ ಪ್ರಯತ್ನ ನಡೆಸಿದ್ದರು. ಆದರೆ ಇಷ್ಟು ದಿನದವರೆಗೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.
ಆದರೆ ಇದೀಗ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಈತನನ್ನು ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.