ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಾಡುತ್ತಿದ್ದ ಯುವತಿಯನ್ನು ಯುವಕನೊಬ್ಬ ಬಾಚಿ ತಬ್ಬಿಕೊಂಡು ಲೈಂಗಿಕವಾಗಿ ಕಿರುಕುಳ ಕೊಟ್ಟ ಘಟನೆ ನಡೆದಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಏಪ್ರಿಲ್ 2 ರಂದು ತಡರಾತ್ರಿ 1.52 ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಬಿಟಿಎಂ ಲೇಔಟ್ ನಲ್ಲಿ ಘಟನೆ ನಡೆದಿದೆ. ಯುವತಿ ತನ್ನ ಗೆಳತಿಯೊಂದಿಗೆ ನಡೆದುಕೊಂಡು ಗಲ್ಲಿಯೊಂದರಲ್ಲಿ ತೆರಳುತ್ತಿದ್ದಾಳೆ.
ಈ ವೇಳೆ ಹಿಂದಿನಿಂದಲೇ ಬರುವ ಯುವಕ ಆಕೆಯನ್ನು ಹಿಡಿದೆಳೆಯುತ್ತಾನೆ. ಯುವತಿ ತೀವ್ರವಾಗಿ ಪ್ರತಿರೋಧ ತೋರಿಸುತ್ತಿದ್ದರೂ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಕಿಸ್ ಮಾಡಲು ಯತ್ನಿಸುತ್ತಾನೆ. ಈ ವೇಳೆ ಯುವತಿಯ ಗೆಳತಿ ಬಿಡಿಸಲು ಹೋಗುತ್ತಾಳೆ. ಯುವತಿ ಕೆಳಕ್ಕೆ ಬಿದ್ದಿರುತ್ತಾಳೆ.
ಕೊನೆಗೆ ಯುವತಿಯನ್ನು ಬಿಟ್ಟು ಆರೋಪಿ ಪರಾರಿಯಾಗುತ್ತಾನೆ. ಆದರೆ ಯುವತಿ ತಾನಾಗಿಯೇ ದೂರು ನೀಡಲು ಹೋಗಿರುವುದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೇ ಪೊಲೀಸರೇ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.