Kerala Viral video: ಟಾರ್ಗೆಟ್ ತಲುಪದ ನೌಕರರನ್ನು ನಾಯಿಗಳಂತೆ ನಡೆಸಿಕೊಂಡ ಖಾಸಗಿ ಕಂಪನಿ ವಿಡಿಯೋ ವೈರಲ್
ತಿರುವನಂತಪುರಂ , ಸೋಮವಾರ, 7 ಏಪ್ರಿಲ್ 2025 (09:50 IST)
ತಿರುವನಂತಪುರಂ: ಟಾರ್ಗೆಟ್ ತಲುಪದ ನೌಕರರನ್ನು ಕೇರಳದ ಖಾಸಗಿ ಕಂಪನಿಯೊಂದು ನಾಯಿಗಳಂತೆ ಕುತ್ತಿಗೆಗೆ ಪಟ್ಟಿ ಕಟ್ಟಿ ಹೀನಾಯವಾಗಿ ನಡೆಸಿಕೊಂಡ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊಚ್ಚಿಯಲ್ಲಿರುವ ಖಾಸಗಿ ಕಂಪನಿಯೊಂದು ಟಾರ್ಗೆಟ್ ತಲುಪದ ನೌಕರರನ್ನು ಈ ರೀತಿ ನಡೆಸಿಕೊಂಡಿದೆ. ನೌಕರರನ್ನು ಮಂಡಿಗಾಲಲ್ಲಿ ನಡೆಸುವುದು, ಪ್ಯಾಂಟ್ ಬಿಚ್ಚಿಸಿ ಅರೆನಗ್ನರಾಗಿಸುವುದು, ನೆಲವನ್ನು ನಾಯಿಯಂತೆ ನೆಕ್ಕಿಸುವುದು ಇತ್ಯಾದಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.
ವಿಡಿಯೋದಲ್ಲಿ ಒಂದಿಬ್ಬರನ್ನು ಈ ರೀತಿ ನಡೆಸಿಕೊಳ್ಳುತ್ತಿದ್ದರೆ ಉಳಿದವರು ನಿಂತು ಸಿನಿಮಾ ರೀತಿ ತಮಾಷೆ ನೋಡುತ್ತಿರುವುದು ಕಂಡುಬಂದಿದೆ. ಇವರೆಲ್ಲಾ ಕೇವಲ 6,000 ರಿಂದ 8000 ರೂ.ಗಳ ಕನಿಷ್ಠ ವೇತನಕ್ಕೆ ಕೆಲಸ ಮಾಡುವವರು ಎನ್ನಲಾಗಿದೆ.
ಮಾರಾಟ ಗುರಿ ತಲುಪದೇ ಇದ್ದರೆ ಈ ನೌಕರರನ್ನು ನಾಯಿಗಳಂತೆ ನಡೆಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ಕೇರಳ ಸರ್ಕಾರ ಎಚ್ಚೆತ್ತುಕೊಂಡು ಕಂಪನಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೇ ಕೇರಳ ಕಾರ್ಮಿಕ ಇಲಾಖೆ ಎಚ್ಚೆತ್ತುಕೊಂಡಿದ್ದು ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ವಿಚಿತ್ರವೆಂದರೆ ವಿಡಿಯೋದಲ್ಲಿರುವ ವ್ಯಕ್ತಿಯೇ ಇದು ಹಳೆಯ ವಿಡಿಯೋ, ನನಗೆ ಕಂಪನಿಯಲ್ಲಿ ಯಾವುದೇ ಚಿತ್ರಹಿಂಸೆ ನೀಡಲಾಗಿಲ್ಲ ಎಂದಿದ್ದಾನೆ. ಹೀಗಾಗಿ ಪ್ರಕರಣದ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.
ಮುಂದಿನ ಸುದ್ದಿ