ಕೊಯಿಲಾಂಡಿ: ಕೇರಳದ ಕೊಯಿಲಾಂಡಿ ಬಳಿಯ ಮನಕಲಂಗರ ದೇವಾಲಯದಲ್ಲಿ ಜಾತ್ರೆ ವೇಳೆ ಆನೆ ರೊಚ್ಚಿಗೆದ್ದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದು ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಉತ್ಸವದ ನಿಮಿತ್ತ ಆನೆಗಳನ್ನು ತರಲಾಗಿತ್ತು. ಇವುಗಳಿಗೆ ಭಾರೀ ಗಾತ್ರದ ಆಭರಣಗಳನ್ನು ಹಾಕಿ ರೆಡಿ ಮಾಡಲಾಗಿತ್ತು. ಆದರೆ ಉತ್ಸವದ ಸಂದರ್ಭದಲ್ಲಿ ಪಟಾಕಿ ಸಿಡಿಸಿದಾಗ ಆನೆಗಳು ರೊಚ್ಚಿಗೆದ್ದಿವೆ. ಪಟಾಕಿಯ ಸದ್ದಿಗೆ ರೊಚ್ಚಿಗೆದ್ದು ಓಡಾಡಿವೆ.
ಇದರಿಂದಾಗಿ ಜಾತ್ರೆಗೆಂದು ಸೇರಿದ್ದವರೂ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಮೂವರು ವೃದ್ಧರು ಆನೆಯ ಕಾಲ್ತುಳಿತಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆನೆಗಳು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಂಬವೇ ಉರುಳಿ ಬಿದ್ದಿದೆ. ಈ ವೇಳೆ ಕಂಬದ ಅಡಿಯಲ್ಲಿ ಹಲವರು ಸಿಲುಕಿದ್ದಾರೆ.
ಘಟನೆಯಲ್ಲಿ 20 ಜನರಿಗೆ ಗಾಯಗಳಾಗಿವೆ. ಇದೀಗ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ದೇವಾಲಯಗಳಲ್ಲಿ ಉತ್ಸವದ ವೇಳೆಗೆ ಆನೆಗಳನ್ನು ಬಳಸಬಹುದೇ ಎಂಬ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.