ನವದೆಹಲಿ: ಈಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಮತ್ತೆ ಅಧಿಕಾರ ಹಿಡಿದಿದೆ. ಹತ್ತು ವರ್ಷಗಳಿಂದ ಆಡಳಿತ ನಡೆಸಿದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸೋತು ಸುಣ್ಣವಾಗಿದೆ.
ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಕೇಜ್ರಿವಾಲ್ ಅವರು ಆಪ್ತರಲ್ಲಿ ಒಬ್ಬರಾಗಿರುವ ಸೌರಭ್ ಭಾರದ್ವಾಜ್ ಅವರೂ ಸೋತಿದ್ದಾರೆ.
ಗ್ರೇಟರ್ ಕೈಲಾಶ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ಬಿಜೆಪಿಯ ಶಿಖಾ ರಾಯ್ ವಿರುದ್ಧ ಸೋಲು ಕಂಡಿದ್ದಾರೆ. ಇದೀಗ ಸೌರಭ್ ಅವರು ಚುನಾವಣೆಯಲ್ಲಿ ಸೋತ ಬಳಿಕ ಯುಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ತಮ್ಮ ಚಾನಲ್‌ಗೆ ಅವರು ನಿರುದ್ಯೋಗಿ ನಾಯಕ (ಬೆರೋಜ್‌ಗರ್ ನೇತಾ) ಎಂದು ಹೆಸರಿಟ್ಟಿದ್ದಾರೆ.
ದೆಹಲಿಯ ಜನರೊಂದಿಗೆ ಸಂಹವನ ಸಾಧಿಸುವ ಉದ್ದೇಶದಿಂದ ಚಾನಲ್ ಶುರು ಮಾಡಿರುವ ಸೌರಭ್, ತಮ್ಮ ಚಾನಲ್ ಅನ್ನು ಪರಿಚಯಿಸುವ 58 ಸೆಕೆಂಡುಗಳ ವಿಡಿಯೊವನ್ನು ಯುಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇಂದಿನಿಂದ ಹೊಸ ವಿಚಾರ ಹಾಗೂ ಹೊಸ ವಿಡಿಯೊದೊಂದಿಗೆ ಜನರ ಮುಂದೆ ಬರುವುದಾಗಿ ತಿಳಿಸಿದ್ದಾರೆ. ಈ ಚಾನಲ್‌ಗೆ ಈಗಾಲೇ 54 ಸಾವಿರಕ್ಕೂ ಹೆಚ್ಚು ಮಂದಿ ಚಂದಾದಾರರಾಗಿದ್ದಾರೆ.
ಈ ಚಾನೆಲ್‌ನಲ್ಲಿ ಜನರ ಪ್ರಶ್ನೆಗಳಿಗೆ ಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ಉತ್ತರ ನೀಡುತ್ತೇನೆ. ಪ್ರತಿದಿನವೂ ಹೊಸ ವಿಷಯಗಳೊಂದಿಗೆ ಕಾಣಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಹಾಗೆಯೇ, ಜನರು ತಮ್ಮೊಂದಿಗೆ ಸಂವಾದ ನಡೆಸಲು ಈ ವೇದಿಕೆಯು ಅವಕಾಶ ಕಲ್ಪಿಸುತ್ತದೆ ಎಂದು ವೃತ್ತಿಯಿಂದ ಎಂಜಿನಿಯರ್ ಆಗಿದ್ದ ಸೌರಭ್ ಹೇಳಿದ್ದಾರೆ.