ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಆರೋಪ- ಪ್ರತ್ಯಾರೋಪಗಳು ಜೋರಾಗಿವೆ.
ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಹಿಡಿಯುವುದಕ್ಕೆ ತಂತ್ರ ಹೆಣೆಯುತ್ತಿವೆ. ಎಎಪಿ ಈಗಾಗಲೇ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತನ್ನ ಅಧಿಪತ್ಯವನ್ನು ಮುಂದುವರೆಸಲು ಸಜ್ಜಾಗಿದೆ.
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಬಿಜೆಪಿಯು ಮತದಾರರಿಗೆ ಚಿನ್ನದ ಸರಗಳನ್ನುಹಂಚುತ್ತಿದೆ ಎಂದು ಆರೋಪಿಸುವ ಮೂಲಕ ಹೊಸ ಚರ್ಚೆಯನ್ನ ಹುಟ್ಟು ಹಾಕಿದ್ದಾರೆ.
ತಮ್ಮ ಪಕ್ಷ ಗೆಲ್ಲುವುದಿಲ್ಲ ಎಂದು ಭಾವಿಸಿರುವ ಬಿಜೆಪಿ ನಾಯಕರು ಮತದಾರರಿಗೆ ಹಂಚಲು ಪಕ್ಷದ ನಾಯಕತ್ವ ನೀಡುವ ಹಣದ ಗಣನೀಯ ಭಾಗವನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ ಮತ್ತು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮತದಾರರಿಗೆ 10 ಸಾವಿರ ನೀಡಬೇಕಾದರೆ ಬಿಜೆಪಿ ಮುಖಂಡರು 9 ಸಾವಿರ ಜೇಬಿಗಿಳಿಸಿ ಉಳಿದ ಹಣವನ್ನು ಮಾತ್ರ ಮತದಾರರಿಗೆ ನೀಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೆಹಲಿಯ ಕೆಲವು ಭಾಗದಲ್ಲಿ ನಾಯಕರು ಕಂಬಳಿಯನ್ನು ಹಂಚಿದರೆ ಮತ್ತಷ್ಟು ಕಡೆ ಅದನ್ನು ಕೊಟ್ಟಿಲ್ಲ. ಬಿಜೆಪಿ ನಾಯಕರು ಬಹಿರಂಗವಾಗಿ ಹಣ, ಹೊದಿಕೆ, ಚಿನ್ನದ ಸರಗಳನ್ನು ಹಂಚಿ ಮತಗಳನ್ನು ಖರೀದಿಸುತ್ತಿದ್ದಾರೆ. ಈ ರೀತಿ ದುಡ್ಡು ಹಂಚಿ ಮತದಾರರನ್ನು ಖರೀದಿಸಲು ಮುಂದಾಗಿರುವ ಬಿಜೆಪಿ ನಾಯಕರು ದೇಶದ್ರೋಹಿಗಳು ಎಂದು ಕಿಡಿಕಾರಿದ್ದಾರೆ.
ನಾನು ಜನರಲ್ಲಿ ಮನವಿ ಮಾಡುವುದೇನೆಂದರೆ ಹಣ, ಹೊದಿಕೆ, ಚಿನ್ನದ ಸರವನ್ನು ಬಿಜೆಪಿಯವರಿಂದ ಪಡೆದು, ನೀವುಗಳು ಎಎಪಿಗೆ ಮತ ಹಾಕಿ ನಿಮ್ಮ ಶಕ್ತಿಯನ್ನು ತೋರ್ಪಡಿಸಿ ಎಂದು ಮನವಿ ಮಾಡಿದ್ದಾರೆ.