ನವದೆಹಲಿ: ಯಮುನಾ ನದಿ ಸ್ವಚ್ಛತೆಗೆ ಬಿಜೆಪಿ ಸರ್ಕಾರ ಗರಿಷ್ಠ ಆದ್ಯತೆ ನೀಡಲಿದೆ ಎಂದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನೇ ಸೋಲಿಸುವ ಮೂಲಕ ಬಿಜೆಪಿಯ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕ ಪರ್ವೇಶ್ ವರ್ಮಾ ಹೇಳಿದ್ದಾರೆ.
ಅವರ ಹುಟ್ಟೂರಾದ ಮುಂಡಕದಲ್ಲಿ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಂದೆಯವರ ಕನಸಿನಂತೆ ಅಪೂರ್ಣವಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.
ದೆಹಲಿ ಜನತೆಯ ಆಶೀರ್ವಾದ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಮಾಜದ ಎಲ್ಲ ವರ್ಗಗಳ ಕಾಳಜಿ ವಹಿಸುವ ಮೂಲಕ ಸುಂದರವಾದ ದೆಹಲಿ ನಿರ್ಮಿಸಲು ಪರಿಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಪರ್ವೇಶ್ ವರ್ಮಾ ಅವರು 2014ರಿಂದ 2024ರವರೆಗೆ ಪಶ್ಚಿಮ ದೆಹಲಿಯ ಸಂಸದರಾಗಿದ್ದರು. ನವದೆಹಲಿ ಕ್ಷೇತ್ರದಲ್ಲಿ ಅರವಿಂದ ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ 4,089 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎಎಪಿಗೆ ದೊಡ್ಡ ಹೊಡೆತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.