ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಕೇಂದ್ರ ಗೃಹ ಸಚಿವಾಲಯ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಾದ್ಯಂತ ಝಡ್-ಕೆಟಗರಿಯ ಭದ್ರತೆಯನ್ನು ನೀಡಿದೆ. 89 ವರ್ಷದ ನಾಯಕ ದಲೈ ಲಾಮಾ ಅವರ ರಕ್ಷಣೆಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆಯನ್ನು ನೀಡಲಾಗಿದೆ.
ಮೂಲಗಳ ಪ್ರಕಾರ, ದಲೈ ಲಾಮಾ ಅವರಿಗೆ ಝಡ್- ಕೆಟಗರಿಯ ರಕ್ಷಣೆ ನೀಡಲಾಗುವುದು. ಸಿಆರ್‌ಪಿಎಫ್ ಕಮಾಂಡೋಗಳು ದೇಶಾದ್ಯಂತ ದಲೈ ಲಾಮಾ ಅವರಿಗೆ ಭದ್ರತೆಯನ್ನು ನೀಡಲಿದ್ದಾರೆ.
ದಲೈ ಲಾಮಾ ಅವರಿಗೆ ಇದುವರೆಗೆ ಹಿಮಾಚಲ ಪ್ರದೇಶದ ಪೊಲೀಸರಿಂದ ರಕ್ಷಣೆ ಇತ್ತು. ಅವರು ದೆಹಲಿ ಅಥವಾ ಯಾವುದೇ ಇತರ ಸ್ಥಳಕ್ಕೆ ಪ್ರಯಾಣಿಸಿದಾಗ ಸ್ಥಳೀಯ ಪೊಲೀಸರು ಭದ್ರತೆಯನ್ನು ನೀಡುತ್ತಿದ್ದರು. ಆದರೆ, ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಈಗ ಅವರಿಗೆ ಏಕರೂಪದ ಭದ್ರತಾ ವ್ಯವಸ್ಥೆಯನ್ನು ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ಮುಂದೆ ದಲೈ ಲಾಮಾ ಅವರ ಭದ್ರತೆಗಾಗಿ ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳ ತಂಡವು ಪಾಳಿಯಲ್ಲಿ ಕೆಲಸ ಮಾಡಲಿದೆ.