ಬೆಂಗಳೂರು: ಕಳೆದ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿತ್ತು. ಈ ವಾರ ಮಳೆಯ ಸಾಧ್ಯತೆಯಿದೆಯೇ ಇಲ್ಲಿದೆ ಈ ವಾರದ ಕಂಪ್ಲೀಟ್ ಹವಾಮಾನ ವರದಿ.
ಕಳೆದ ವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಂತೂ ವ್ಯಾಪಕ ಮಳೆಯಾಗಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಎರಡು ದಿನ ವಿಪರೀತ ಮಳೆಯಾಗಿತ್ತು. ಇದಲ್ಲದೆ ಉತ್ತರದ ಕೆಲವು ಜಿಲ್ಲೆಗಳಲ್ಲೂ ಮಳೆಯ ಸಿಂಚನವಾಗಿತ್ತು.
ವಿಪರೀತ ತಾಪಮಾನದಿಂದ ತತ್ತರಿಸಿದ್ದ ಜನಕ್ಕೆ ಈ ಮಳೆಯ ನೆಮ್ಮದಿ ನೀಡಿತ್ತು. ಆದರೆ ಈ ವಾರ ಕಳೆದ ವಾರದಷ್ಟು ಮಳೆಯಾಗುವ ಸಾಧ್ಯತೆಯಿಲ್ಲ. ಈ ವಾರ ಕೆಲವೊಂದು ಕಡೆ ಮೋಡ ಕವಿದ ವಾತಾವರಣ ಬಿಟ್ಟರೆ ವಾರಂತ್ಯದವರೆಗೂ ಮಳೆಯ ಸಾಧ್ಯತೆ ಕಡಿಮೆ ಎಂದು ವರದಿಗಳು ಹೇಳಿವೆ.
ಸೋಮವಾರ ಅಂದರೆ ಇಂದು ರಾಜ್ಯದಲ್ಲಿ ಸಂಪೂರ್ಣ ಬಿಸಿಲಿನ ವಾತಾವರಣವಿರಲಿದೆ. ಆದರೆ ಬುಧವಾರದ ನಂತರ ದಕ್ಷಿಣ ಕನ್ನಡ ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಸಣ್ಣ ಮಟ್ಟಿನ ಮಳೆಯಾಗುವ ಸಾಧ್ಯತೆಯಿದೆ. ಇದನ್ನು ಹೊರತುಪಡಿಸಿ ರಾಜ್ಯದ ಗರಿಷ್ಠ ತಾಪಮಾನ ಈ ವಾರ 32-33 ಡಿಗ್ರಿಯಷ್ಟಿರಲಿದೆ ಎಂದು ತಿಳಿದುಬಂದಿದೆ.