ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಯಿಂದ ಸುಸ್ತಾಗಿದ್ದ ಸಿಲಿಕಾನ್ ಸಿಟಿ ಮಂದಿಗೆ ಇಂದು ಬೆಳ್ಳಂಬೆಳಗ್ಗೆನೆ ವರುಣನ ಆಗಮನವಾಗಿದೆ. ನಗರದ ಹಲವೆಡೆ ಗುಡುಗು, ಮಿಂಚು ಸಹಿತ ಧಾರಕಾರ ಮಳೆಯಾಗಿದೆ.
ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳಿದ್ದು ಮನೆಗಳು, ಕಾರುಗಳು ಜಖಂಗೊಂಡಿವೆ. ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಸವಾರರು ವಾಹನ ಚಲಾಯಿಸಲು ಪರದಾಡಿದರು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇದೇ ಭಾನುವಾರದವರೆಗೆ ಮಳೆಯಾಗುವ ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಒಳ ಮತ್ತು ಹೊರವಲಯಗಳಲ್ಲಿ ಗುರುವಾರ ಬೆಳಗ್ಗೆಯೇ ಮಳೆಯಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ ವರುಣ ತಂಪೆರೆದಿದ್ದಾನೆ. ಇಡೀ ನಗರದಲ್ಲಿ ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇಂದು ಬೆಳಗ್ಗೆಯಷ್ಟೇ ಹವಾಮಾನ ಇಲಾಖೆ ಬೆಂಗಳೂರು ನಗರಕ್ಕೆ ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ ಎಂದು ವರದಿ ನೀಡಿತ್ತು.
ಇದರ ಬೆನ್ನಲ್ಲೇ ಬೆಂಗಳೂರಿನಾದ್ಯಂತ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ವಿಧಾನಸೌಧ, ಶಿವಾಜಿ ನಗರ, ಹೆಚ್ಎಸ್ ಆರ್ ಲೇಔಟ್, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಬಸವನಗುಡಿ, ಜಯನಗರ, ಆರ್ ಆರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ.