ಚೀನಾ: ದೇಹದಿಂದ ಕೊಳಕು ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಇಬ್ಬರು ಪ್ರಯಾಣಿಕರ ನಡುವೆ ಜಗಳವಾಗಿ ಕೊನೆಗೆ ವಿಮಾನವೇ 1 ಗಂಟೆ ತಡವಾದ ಪ್ರಕರಣ ಚೀನಾದಲ್ಲಿ ನಡೆದಿದೆ.
ಚೀನಾದ ಶೆನ್ಝೆನ್ ನಿಂದ ಶಾಂಘೈಗೆ ಹೋಗುವ ವಿಮಾನ ಇದಾಗಿತ್ತು. ವಿಮಾನ ಇನ್ನೇನು ಟೇಕ್ ಆಫ್ ಆಗುವುದರಲ್ಲಿತ್ತು. ಈ ವೇಳೆ ಓರ್ವ ಪ್ರಯಾಣಿಕಳು ತನ್ನ ಸಹ ಪ್ರಯಾಣಿಕನಿಂದ ದುರ್ಗಂಧ ಬರುತ್ತಿದೆ ಎಂದು ತಗಾದೆ ತೆಗೆದಿದ್ದಾಳೆ. ಅದಕ್ಕೆ ನನ್ನ ದೇಹದಿಂದಲ್ಲ ನಿನ್ನ ದೇಹದಿಂದಲೇ ದುರ್ಗಂಧ ಬರುತ್ತಿದೆ ಎಂದು ಅಕ್ಷರಶಃ ಜಗಳವಾಡಿದ್ದಾರೆ.
ಇದರ ನಡುವೆ ಇಬ್ಬರು ಮಹಿಳಾ ಸಿಬ್ಬಂದಿ ಮತ್ತು ಇಬ್ಬರು ಪುರುಷ ಸಿಬ್ಬಂದಿ ಜಗಳವಾಡುತ್ತಿದ್ದವರನ್ನು ಬೇರ್ಪಡಿಸುವಲ್ಲಿ ಸುಸ್ತಾಗಿ ಹೋದರು. ಇಬ್ಬರ ನಡುವೆ ಕಿತ್ತಾಟ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಇದರಲ್ಲಿ ಒಬ್ಬಾಕೆ ಸಿಬ್ಬಂದಿಯೊಬ್ಬರಿಗೆ ಕಚ್ಚಿಯೇ ಬಿಟ್ಟಳು.
ಕಚ್ಚಿಸಿಕೊಂಡ ಸಿಬ್ಬಂದಿಯನ್ನು ಕೊನೆಗೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಘಟನೆ ಬಳಿಕ ಗಲಾಟೆ ಮಾಡಿದ ಇಬ್ಬರೂ ಪ್ರಯಾಣಿಕರನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಇವರ ರಗಳೆಗಳಿಂದಾಗಿ ವಿಮಾನ ಬರೋಬ್ಬರಿ 1 ಗಂಟೆ ತಡವಾಗಿ ಟೇಕ್ ಆಫ್ ಆಗಿದೆ.