ಸತ್ನಾ (ಮಧ್ಯಪ್ರದೇಶ): ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಲೋಕೋ ಪೈಲಟ್ ಮೇಲೆ ಅವರ ಪತ್ನಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಲೋಕೇಶ್ ಎಂದು ಗುರುತಿಸಲ್ಪಟ್ಟ ಲೋಕೋ ಪೈಲಟ್, ತಮ್ಮ ಪತ್ನಿಯಿಂದ ಹಲ್ಲೆಗೆ ಒಳಗಾಗುತ್ತಿರುವ ವಿಡಿಯೋವನ್ನು ನೀಡಿ, ದೂರು ನೀಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೂತಿದ್ದ ಲೋಕೇಶ್ ಮೇಲೆ ಪತ್ನಿ ಏಕಾಏಕಿ ದಾಳಿ ಮಾಡಿದ್ದಾಳೆ. ಆತನನ್ನು ಎಳೆದಾಡಿ ಹಲ್ಲೆ ಮಾಡಿದ್ದಾಳೆ. ರಹಸ್ಯವಾಗಿ ಇಟ್ಟಿದ್ದ ಮೊಬೈಲ್‌ನಲ್ಲಿ ಇದು ಸೆರೆಯಾಗಿದೆ.
ವಿಡಿಯೋ ಪ್ರಕಾರ, ಈ ಘಟನೆ ಮಾರ್ಚ್ 20 ರಂದು ನಡೆದಿದ್ದು, ಮರುದಿನ ಲೋಕೇಶ್ ಕೊಟ್ವಾಲಿ ಪೊಲೀಸ್ ಠಾಣೆಗೆ ಬಂದು ಹಲ್ಲೆ ಸಂಬಂಧ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
"ಇತ್ತೀಚೆಗೆ, ಮಹಿಳೆಯೊಬ್ಬರು ಪುರುಷನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ವ್ಯಕ್ತಿ, ರೈಲ್ವೆ ಲೋಕೋ ಪೈಲಟ್ ಲೋಕೇಶ್ ಎಂದು ಗುರುತಿಸಲ್ಪಟ್ಟಿದ್ದು, ಮಾರ್ಚ್ 21 ರಂದು ತನ್ನ ಪತ್ನಿ, ಅತ್ತೆ ಮತ್ತು ಭಾವನ ವಿರುದ್ಧ ಹಲ್ಲೆಯ ದೂರು ದಾಖಲಿಸಿದ್ದರು. ಅದರ ಮೇಲೆ ಕ್ರಮ ಕೈಗೊಂಡು, ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಹಿತಾ (ಬಿಎನ್‌ಎಸ್) ಸೆಕ್ಷನ್ 296, 115 ಮತ್ತು 351 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಸಿಎಸ್‌ಪಿ, ಸತ್ನಾ) ಮಹೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.