ನವದೆಹಲಿ: ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದವನು ನಾನು. ಒಂದಿಂಚು ಜಾಗವನ್ನೂ ಅಕ್ರಮವಾಗಿ ಕಬಳಿಸಿಲ್ಲ. ನನ್ನ ಮೇಲೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮಾಡಿದ ಆರೋಪಕ್ಕೆ ನಾನು ಅರ್ಹನೇ ಅಲ್ಲ.ಹೀಗೆಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್ ಬಿಲ್ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕಾಂಗ್ರೆಸ್ ನಾಯಕರು ವಕ್ಫ್ ಜಮೀನನ್ನು ತಮ್ಮ ಸ್ವಂತ ಹಿತಾಸಕ್ತಿಗೆ ಬಳಸಿಕೊಂಡರು. ಕಾಂಗ್ರೆಸ್ ನಾಯಕನ ಮೇಲೆಯೇ ಭೂ ಕಬಳಿಕೆ ಮಾಡಿದ ಆರೋಪವಿದೆ ಎಂದಿದ್ದಾರೆ.
ಈ ಮೂಲಕ ಮಲ್ಲಿಕಾರ್ಜುನ ಖರ್ಗೆ ಮೇಲೆ ವಕ್ಫ್ ಜಮೀನು ಕಬಳಿಸಿದ ಆರೋಪ ಮಾಡಿದ್ದಾರೆ. ಇದು ಖರ್ಗೆಯನ್ನು ಕೆರಳಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ನಾನು ಈವತ್ತು ಎದ್ದು ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ. ಬಿಜೆಪಿ ಸಂಸದರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ.
ನಾನು ಅಕ್ರಮವಾಗಿ ಒಂದಿಂಚೂ ಜಾಗ ಕಬಳಿಸಿಲ್ಲ. ಅವರ ಆರೋಪಗಳಿಗೆ ನಾನು ಅರ್ಹನೇ ಅಲ್ಲ. ಒಂದು ವೇಳೆ ಅವರ ಆರೋಪ ಸಾಬೀತಾದರೆ ನಾನೇ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಒಂದು ವೇಳೆ ಅವರ ಆರೋಪ ಸುಳ್ಳು ಎಂದು ಸಾಬೀತಾದರೆ ಆ ಕ್ಷಣ ಅವರು ರಾಜೀನಾಮೆ ಕೊಡಬೇಕು. ನನ್ನ ವಿರುದ್ಧ ನೀಡಿರುವ ಹೇಳಿಕೆಗೆ ಅನುರಾಗ್ ಠಾಕೂರ್ ತಕ್ಷಣವೇ ಕ್ಷಮೆ ಕೇಳಬೇಕು ಎಂದು ಖರ್ಗೆ ಕೆಂಡಾಮಂಡಲರಾಗಿ ಹೇಳಿಕೆ ನೀಡಿದ್ದಾರೆ.