Select Your Language

Notifications

webdunia
webdunia
webdunia
webdunia

Waqf ಹಗರಣದಲ್ಲಿ ಅನೇಕ ಕಾಂಗ್ರೆಸ್ ಮುಖಂಡರ ಹೆಸರುಗಳಿವೆ: ಬಿವೈ ವಿಜಯೇಂದ್ರ ಬಾಂಬ್

BY Vijayendra

Krishnaveni K

ಬೆಂಗಳೂರು , ಗುರುವಾರ, 3 ಏಪ್ರಿಲ್ 2025 (12:41 IST)
ಬೆಂಗಳೂರು: ವಕ್ಫ್ ಹಗರಣದಲ್ಲಿ ಅನೇಕ ಕಾಂಗ್ರೆಸ್ ಮುಖಂಡ ಹೆಸರುಗಳಿವೆ ಎಂದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ಅವರು ಈ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ಸಿಗರು ವಕ್ಫ್ ಹೆಸರು ಹೇಳಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದವರು. ಇದಕ್ಕೆ ಕರ್ನಾಟಕವೇ ತಾಜಾ ಉದಾಹರಣೆ. ಈ ಹಗರಣದಲ್ಲಿ ಕಾಂಗ್ರೆಸ್ಸಿನ ಅನೇಕ ಮುಖಂಡರ ಹೆಸರು ಕೂಡ ಈ ಹಿಂದೆಯೂ ಕೇಳಿಬಂದಿತ್ತು. ಹಾಗಾಗಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ಸಿನವರು ಸಹಜವಾಗಿಯೇ ವಿರೋಧಿಸುತ್ತಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಏಕಾಏಕಿ ವಕ್ಫ್ ಹೆಸರು ಹೇಳಿಕೊಂಡು ಸಾವಿರಾರು ವರ್ಷಗಳ ಇತಿಹಾಸ ಇರುವ ಮಠಮಾನ್ಯಗಳ, ದೇವಾಲಯಗಳ ಜಮೀನನ್ನು ವಶಕ್ಕೆ ಪಡೆಯುತ್ತಿದ್ದರು. ನಮ್ಮ ರಾಜ್ಯದಲ್ಲೂ ರೈತರ ಜಮೀನು ಕಬ್ಜಾ ಮಾಡಿಕೊಂಡಿದ್ದಾರೆ. ಅದನ್ನು ಯಾರಿಗೂ ಪ್ರಶ್ನೆ ಮಾಡಲು ಅವಕಾಶ ಇಲ್ಲದಿದ್ದರೆ ಇದ್ಯಾವ ನ್ಯಾಯ? ನಾವು ಯಾವ ದೇಶದಲ್ಲಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

ದರಿದ್ರ- ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ ಎಂದು ಅವರು ತಿಳಿಸಿದ್ದಾರೆ.  ಜನರ ವಿಶ್ವಾಸ ಮತ್ತು ಆಶೀರ್ವಾದ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಎಲ್ಲವನ್ನೂ ಗಾಳಿಗೆ ತೂರಿ ರೈತರು, ಬಡವರು, ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರ ಬಗ್ಗೆ ನೋವಿದೆ ಎಂದು ತಿಳಿಸಿದರು.

40 ಶೇಕಡಾ ಸರಕಾರ ಎಂದು ಬಿಜೆಪಿಯನ್ನು ಕರೆದಿದ್ದರು. ಅದಕ್ಕೆ ಪುರಾವೆ ಇಲ್ಲ. ನಾವು ಮುಗ್ಗರಿಸಿದ್ದೂ ಆಗಿದೆ. ಬಿಜೆಪಿ ನಿರಂತರ ಹೋರಾಟ ಮಾಡುವ ಮೂಲಕ ಈ ಸರಕಾರಕ್ಕೆ ತಕ್ಕ ಶಾಸ್ತಿ ಮಾಡಲಿದೆ ಎಂದು ನುಡಿದರು.

ಕಳಚಿ ಬಿದ್ದ ಸಿದ್ದರಾಮಯ್ಯನವರ ಮುಖವಾಡ
ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಆನೆ ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಕಪಟ ಸಮಾಜವಾದಿ ಮುಖವಾಡ ಈ ಅಧಿಕಾರಾವಧಿಯಲ್ಲಿ ಕಳಚಿ ಬಿದ್ದಿದೆ ಎಂದು ವಿಜಯೇಂದ್ರ ಅವರು ವಿವರಿಸಿದರು.

ಹಿಂದೆ ಬಿಜೆಪಿ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ ಸಹ ಅಂದಿನ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ಸಿಗರು ಸಾಕಷ್ಟು ಅಪಪ್ರಚಾರ ಮಾಡಿದರು. ಜನರ ಒಳಿತಿಗಾಗಿ ಈ ಸರಕಾರ ಬಂದಿಲ್ಲ; ಜನರ ಒಳಿತಿಗಾಗಿ ಅಧಿಕಾರ ಪಡೆದಿದ್ದರೆ ಇಂಥ ದರಿದ್ರ ಸರಕಾರವನ್ನು ಜನತೆ ನೋಡಬೇಕಿರಲಿಲ್ಲ ಎಂದು ವಿಶ್ಲೇಷಿಸಿದರು.

ಹೈಕಮಾಂಡ್ ಅಥವಾ ಗಾಂಧಿ ಕುಟುಂಬಕ್ಕೆ ಕರ್ನಾಟಕ ರಾಜ್ಯವನ್ನು ಅಡ ಇಡಲು ಮತ್ತು ಚುನಾವಣೆ ವೇಳೆ ಎಟಿಎಂ ಆಗಿ ಪರಿವರ್ತಿಸಲು ಕಾಂಗ್ರೆಸ್ಸಿಗೆ ಇಲ್ಲಿ ಸರಕಾರ ಬೇಕಿದೆ ಎಂದು ಟೀಕಿಸಿದರು. ಹಿಂದಿನ ಬಿಜೆಪಿ ಸರಕಾರದ ಮೇಲಿನ ಅಪಪ್ರಚಾರವನ್ನು ನಾವು ಸರಿಯಾಗಿ ನಿಭಾಯಿಸಿಲ್ಲ; ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅದರ ಪರಿಣಾಮವಾಗಿ ವಿಪಕ್ಷದಲ್ಲಿದ್ದೇವೆ. ಅದರ ಬಗ್ಗೆ ನೋವಿಲ್ಲ ಎಂದು ತಿಳಿಸಿದರು.

ಜನಜಾಗೃತಿ ಮೂಡಿಸಲು ಜನಾಕ್ರೋಶ ಯಾತ್ರೆ
ರಾಜ್ಯದಲ್ಲಿ ತೀವ್ರ ಬೆಲೆ ಏರಿಕೆ ಮತ್ತು ಸರಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ, ಪರಿಶಿಷ್ಟ ಜಾತಿ, ಜನಾಂಗದ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣ ದುರ್ಬಳಕೆ- ಇವೆಲ್ಲವನ್ನೂ ರಾಜ್ಯದ ಜನತೆ ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಿನ್ನೆ ಆರಂಭವಾದ ಅಹೋರಾತ್ರಿ ಧರಣಿಯ ಹೋರಾಟವು ಏ.7ರಿಂದ ಪ್ರಾರಂಭವಾಗುವ ಜನಾಕ್ರೋಶ ಯಾತ್ರೆ ಮೂಲಕ ರಾಜ್ಯದ ಪ್ರತಿ ಜಿಲ್ಲೆಗೆ ತಲುಪಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರದ ಹಗಲುದರೋಡೆಯನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಜನರ ಹಣ ಲೂಟಿ ಮಾಡಿ, ಜನರಿಗೆ ಬರೆ ಎಳೆದು ಅಧಿಕಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ದೋಖಾಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು. ಈ ಸರಕಾರದ ನೈಜ ಮುಖವಾಡವನ್ನು ತಿಳಿಸುವ ಕೆಲಸವನ್ನು ಮುಂದಿನ ಒಂದು ತಿಂಗಳು ಮಾಡಲಿದ್ದೇವೆ ಎಂದರು.
 

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆ ಶುರು