Select Your Language

Notifications

webdunia
webdunia
webdunia
webdunia

ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯ ಅಹೋರಾತ್ರಿ ಧರಣಿ ಆರಂಭ

BY Vijayendra

Krishnaveni K

ಬೆಂಗಳೂರು , ಬುಧವಾರ, 2 ಏಪ್ರಿಲ್ 2025 (15:05 IST)
ಬೆಂಗಳೂರು: ರಾಜ್ಯದಲ್ಲಿ ಬೆಲೆ ಏರಿಕೆ ಗ್ಯಾರಂಟಿ ಕೊಡುವ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ವಾಗ್ದಾಳಿ ನಡೆಸಿದ್ದಾರೆ.
 
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಬಿಜೆಪಿಯ ಅಹೋರಾತ್ರಿ ಧರಣಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನುಡಿದಂತೆ ನಡೆದ ಸರಕಾರ ಎಂದು ಜಾಹೀರಾತು ನೀಡುತ್ತಿದ್ದಾರೆ. ಇದು ಮನುಷ್ಯತ್ವ ಇರುವ ಸರಕಾರ ಅಲ್ಲ; ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಗ್ಯಾರಂಟಿ ಅನುಷ್ಠಾನ ಮಾಡುವುದಾಗಿ ಹೇಳಿದ್ದರು. ಆದರೆ, ತಿಂಗಳುಗಳೇ ಕಳೆದರೂ ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದು ಆಕ್ಷೇಪಿಸಿದರು.
 
ಕುರ್ಚಿಯ ಅಭದ್ರತೆ ಕಾಡುತ್ತಿದ್ದರೆ..
ಮುಖ್ಯಮಂತ್ರಿಗಳೇ ದಯವಿಟ್ಟು ನಿಮ್ಮ ಎ.ಸಿ. ರೂಮಿನಿಂದ ಹೊರಕ್ಕೆ ಬನ್ನಿ. ನೀವು ಬೆಂಗಳೂರಿನ ಸಿಎಂ ಅಲ್ಲ; ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸಚಿವರ ಜೊತೆ ಪ್ರವಾಸ ಮಾಡಿ ಎಂದು ವಿಜಯೇಂದ್ರ ಅವರು ಆಗ್ರಹಿಸಿದರು.

ಸಿದ್ದರಾಮಯ್ಯನವರೇ, ಹಿಂದೆ ರಾಜ ಮಹಾರಾಜರು ಮಾರುವೇಷದಲ್ಲಿ ತೆರಳಿ ಪ್ರಜೆಗಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಬಳಿಕ ಜನರಿಗೆ ಅನುಕೂಲ ಆಗುವ ಯೋಜನೆ ಜಾರಿಗೊಳಿಸುತ್ತಿದ್ದರು. ಮಹಾರಾಜರ ಸ್ಥಾನದಲ್ಲಿರುವ ನೀವು ಕುರ್ಚಿಯ ಅಭದ್ರತೆ ಕಾಡುತ್ತಿದ್ದರೆ ಡಿ.ಕೆ.ಶಿವಕುಮಾರರನ್ನೂ ಜೊತೆಗೇ ಕರೆದುಕೊಂಡು ಹೋಗಿ ಎಂದು ವ್ಯಂಗ್ಯವಾಗಿ ತಿಳಿಸಿದರು. ಬಿತ್ತನೆ ಬೀಜದ ದರ ಹೆಚ್ಚಾಗಿದೆ. ಕಳೆದ 20 ತಿಂಗಳ ಆಡಳಿತದಲ್ಲಿ ಜನರು ಖುಷಿ ಆಗಿದ್ದಾರಾ ಎಂಬ ಬಗ್ಗೆ ಅರಿತುಕೊಳ್ಳಲು ರಾಜ್ಯ ಪ್ರವಾಸ ಮಾಡಿ ಎಂದು ಆಗ್ರಹಿಸಿದರು.
 
ಮಹಿಳೆಯರಿಗೆ 2 ಸಾವಿರ, ಪುಕ್ಕಟೆ ವಿದ್ಯುತ್ ಸೇರಿ ವಿವಿಧ ಯೋಜನೆಗಳ ಕುರಿತು ಭಾಷಣ ಮಾಡುತ್ತಾರೆ. ಆದರೆ, ಅವುಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದು ದೂರಿದರು. ಇದು ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುವ ಸರಕಾರ ಎಂದು ಆರೋಪಿಸಿದರು.
 
ಬಡವರು, ರೈತರು, ಜನಸಾಮಾನ್ಯರು ಇವತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲದ ದುಸ್ಥಿತಿ ಬಂದಿದೆ. ಪೆಟ್ರೋಲ್, ಡೀಸೆಲ್, ಹಾಲಿನ ದರ, ಸರಕಾರಿ ಆಸ್ಪತ್ರೆಗಳ ಶುಲ್ಕ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು. ನಿನ್ನೆಯಷ್ಟೇ ಡೀಸೆಲ್ ಬೆಲೆ 2 ರೂ. ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು. ಇದರಿಂದ ಸರಕುಗಳ ದರವೂ ಹೆಚ್ಚಾಗಲಿದೆ ಎಂದು ತಿಳಿಸಿದರು.
 
ಏಪ್ರಿಲ್ 7ರಿಂದ ಜನಾಕ್ರೋಶ ಯಾತ್ರೆ
ಏಪ್ರಿಲ್ 7ರಿಂದ ಜನಾಕ್ರೋಶ ಯಾತ್ರೆ ಪ್ರಾರಂಭಿಸುತ್ತೇವೆ. ಕೇಂದ್ರದ ಸಚಿವ ಪ್ರಲ್ಹಾದ ಜೋಶಿಯವರು ಉದ್ಘಾಟಿಸುತ್ತಾರೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಕಾನೂನುಬಾಹಿರವಾಗಿ ಶೇ 4 ಮೀಸಲಾತಿ ನೀಡಿದ್ದಾರೆ. ಮತ್ತೊಂದು ಕಡೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‍ಇಪಿ, ಟಿಎಸ್‍ಪಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆ ನಿರಂತರವಾಗಿದೆ. ಇವೆಲ್ಲವನ್ನೂ ವಿರೋಧಿಸಿ ಜನಾಕ್ರೋಶ ಯಾತ್ರೆ ನಡೆಸಲಿದ್ದೇವೆ ಎಂದು ತಿಳಿಸಿದರು.
 
ಭ್ರಷ್ಟ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆಯ ವಿರುದ್ಧ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಹೋರಾಟ ಇದು ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರುವ ಮೊದಲು ಸಾಕಷ್ಟು ಭರವಸೆಗಳನ್ನು ನಾಡಿನ ಜನತೆಗೆ ನೀಡಿತ್ತು. ಜನರ ಕಣ್ಣಿಗೆ ಮಣ್ಣೆರಚಿ ಈ ಸರಕಾರ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ಮಾತನಾಡಿ, ಇಲ್ಲಿನದು ಭ್ರಷ್ಟರ ಸರಕಾರ ಎಂದು ಟೀಕಿಸಿದರು. ಇದು ಭ್ರಷ್ಟಾಚಾರದ ಗ್ಯಾರಂಟಿ ನೀಡುವ ಸರಕಾರ ಎಂದು ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಬಿಜೆಪಿಯ ಸರಕಾರ ಮುಂದಿನ ದಿನಗಳಲ್ಲಿ ಬರಲಿದೆ. ನಮ್ಮ ಮೇಲೆ ಶೇ 40 ಕಮಿಷನ್‍ನ ಸುಳ್ಳು ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸುಳ್ಳು ಆರೋಪಕ್ಕಾಗಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಕೇಂದ್ರದ ಬಿಜೆಪಿ ಸರಕಾರವು ಡಾ. ಅಂಬೇಡ್ಕರ್ ಅವರಿಗೆ ಮತ್ತು ಅವರ ಸಂವಿಧಾನಕ್ಕೆ
ಗೌರವ ಕೊಡುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯ ಹೆಸರಿಗಷ್ಟೇ ಮುಖ್ಯಮಂತ್ರಿ. ಅವರೀಗ ನಿದ್ದೆರಾಮಯ್ಯ ಆಗಿದ್ದಾರೆ. ಮನೆಹಾಳ ಸಿದ್ದರಾಮಯ್ಯ ಎಂದು ಜನರು ಟೀಕಿಸುತ್ತಿದ್ದಾರೆ. ಕರ್ನಾಟಕದ ಜನರ ಪಾಲಿಗೆ ಈ ಕಾಂಗ್ರೆಸ್ ಸರಕಾರ ಸತ್ತು ಹೋಗಿದೆ ಎಂದು ಆರೋಪಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

Waqf bill ಮಂಡನೆಯಾಗುತ್ತಿದ್ದಂತೇ ಪಟಾಕಿ ಸಿಡಿಸಿ ಥ್ಯಾಂಕ್ಯೂ ಮೋದಿಜಿ ಎಂದ ಮುಸ್ಲಿಂ ಮಹಿಳೆಯರು: ವಿಡಿಯೋ