Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ವಿರುದ್ಧದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳುವೆ- ಬಿಎಸ್‌ ಯಡಿಯೂರಪ್ಪ

EX CM BS Yediyurappa, Karnataka Congress Government, BJP Protest

Sampriya

ಬೆಂಗಳೂರು , ಮಂಗಳವಾರ, 1 ಏಪ್ರಿಲ್ 2025 (18:47 IST)
Photo Courtesy X
ಬೆಂಗಳೂರು: ರಾಜ್ಯ ಸರಕಾರವು ಜನವಿರೋಧಿ ಬೆಲೆ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಬಿಜೆಪಿ ನಾಳೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲಿದ್ದು, ನಾನು ಅದರಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಪ್ರಕಟಿಸಿದರು.

ಬೆಂಗಳೂರಿನ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಉಸಿರು ಕಟ್ಟುವ ಪರಿಸ್ಥಿತಿ ಬಂದಿದೆ. ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಪ್ರಾರಂಭ ಮಾಡುತ್ತಿದ್ದೇವೆ. ನೋವು ಅನುಭವಿಸುತ್ತಿರುವ ಎಲ್ಲರೂ ಪಕ್ಷಭೇದ ಮರೆತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಹಾಗೂ ಹೋರಾಟ ಯಶಸ್ವಿ ಮಾಡುವಂತೆ ವಿನಂತಿಸಿದರು.

ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ಮುಸುಕಿನ ಗುದ್ದಾಟ ನಡೆದಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಅವರಿಗೆ ಮುಖ್ಯವೇ ಹೊರತು ಜನರು ಪ್ರಮುಖರಲ್ಲ ಎಂದು ಟೀಕಿಸಿದರು. ಬಿಜೆಪಿಯ ಹೋರಾಟ ಇನ್ನೂ ಅನೇಕ ದಿನ ನಡೆಯಲಿದೆ. ಮೈಸೂರಿನಲ್ಲಿ ನಡೆಯುವ ಹೋರಾಟದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಮಾಧ್ಯಮ ಸ್ನೇಹಿತರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದು ಭಾವಿಸುತ್ತೇನೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಸ್ನೇಹಿತರು ನಮ್ಮÀ ಹೋರಾಟದಲ್ಲಿ ಗಟ್ಟಿಯಾಗಿ ನಿಂತಾಗ ಈ ಸರಕಾರ ಒಂದು ಹೆಜ್ಜೆ ಹಿಂದಿಡಬಹುದು ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ಯತ್ನಾಳ್ ಅವರ ಉಚ್ಚಾಟನೆ ವಿಚಾರವಾಗಿ ಯಾವುದೇ ಮಾತನಾಡುವುದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ಅಜೀರ್ಣ ಆಗುವಷ್ಟು ಬಹುಮತವನ್ನು ಜನರು ಕಾಂಗ್ರೆಸ್ ಸರಕಾರಕ್ಕೆ ಕೊಟ್ಟಾಗ ಒಂದು ರೀತಿ ತುಘಲಕ್ ದರ್ಬಾರ್ ನಡೆಸಿ, ಜನಹಿತವನ್ನು ಮರೆತು, ಸಾಮಾನ್ಯ ಜನರು ಬದುಕಲಾಗದಷ್ಟು, ಉಸಿರು ಕಟ್ಟುವ ಪರಿಸ್ಥಿತಿಯನ್ನು ತಂದದ್ದು ಸಿದ್ದರಾಮಯ್ಯ ಸರಕಾರದ ಸಾಧನೆ ಎಂದು ಅವರು ಟೀಕಿಸಿದರು. ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ನೀಡುವ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಆಕ್ಷೇಪಿಸಿದ ಅವರು, ಉಳಿದ ಹಿಂದೂಗಳೇನು ಅಪರಾಧ ಮಾಡಿದ್ದಾರೆ ಎಂದು ಕೇಳಿದರು. ನಾವು ಮುಸ್ಲಿಮರ ವಿರೋಧಿಗಳಲ್ಲ ಎಂದು ತಿಳಿಸಿದರು. ಎಲ್ಲರನ್ನೂ ಸರಿ ಸಮಾನರಾಗಿ ನೋಡುವುದು ರಾಜ್ಯದ ಮುಖ್ಯಮಂತ್ರಿಯ ಕರ್ತವ್ಯ. ಅದನ್ನು ಮಾಡದೇ ಹಿಂದೂಗಳಿಗೆ ದ್ರೋಹ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಪ್ರತಿ ತಿಂಗಳು ಒಂದಲ್ಲ ಒಂದು ರೀತಿ ಬೆಲೆ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಬಸ್ ಪ್ರಯಾಣದರ ಹೆಚ್ಚಿಸಿದ್ದಾರೆ. ಸಾಮಾನ್ಯ ಜನರು ಬಳಸುವ ಹಾಲಿನ ದರವನ್ನು ಇನ್ನೆಂದೂ ಇಲ್ಲದ ರೀತಿಯಲ್ಲಿ ಒಂದೇಬಾರಿಗೆ ಒಂದು ಲೀಟರ್‍ಗೆ 4 ರೂ. ಹೆಚ್ಚಿಸಿದ್ದಾರೆ. ಒಟ್ಟಾರೆಯಾಗಿ ಒಂದೇ ವರ್ಷದಲ್ಲಿ ಹಾಲಿಗೆ ಒಂದು ಲೀಟರಿಗೆ 9 ರೂ. ಹೆಚ್ಚಿಸಿದ್ದಾರೆ ಎಂದು ವಿವರಿಸಿದರು.

ವಿದ್ಯುತ್ ದರವನ್ನು ಪ್ರತಿ ಯೂನಿಟ್‍ಗೆ 36 ಪೈಸೆ ಹೆಚ್ಚಿಸಿದ್ದಾರೆ. ಈ ಸರಕಾರ ಬಂದ ಬಳಿಕ ಎರಡನೇ ಬಾರಿ ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ಇದರಿಂದ ಸಣ್ಣ, ಮಧ್ಯಮ ವರ್ಗದ ಜನರು ಜೀವನ ಮಾಡಲು ಸಾಧ್ಯವಿಲ್ಲದೆ ಉಸಿರು ಕಟ್ಟುವ ಪರಿಸ್ಥಿತಿ ಬಂದಿದೆ ಎಂದರು.

ಹಿಂದೆ ರೈತರು ಟ್ರಾನ್ಸ್‍ಫಾರ್ಮರ್ ಹಾಕಿಸಲು 30 ಸಾವಿರ ವೆಚ್ಚ ಆಗುತ್ತಿತ್ತು. ಈಗ 2.5 ಲಕ್ಷ ಏರಿಸಿದ್ದಾರೆ. ಸ್ಟಾಂಪ್ ಡ್ಯೂಟಿ, ಎಸ್.ಆರ್.ವ್ಯಾಲ್ಯೂ, ಗೈಡೆನ್ಸ್ ವ್ಯಾಲ್ಯೂ- ಇವನ್ನು ಶೇ 100ರಿಂದ ಶೇ 1000ದಷ್ಟು ಏರಿಸಿದ್ದಾರೆ. ದಿನಬಳಕೆಯ ಪ್ರತಿ ವಸ್ತುವಿನ ಬೆಲೆಯನ್ನು ಏರಿಸುತ್ತಿರುವ ಕಾಂಗ್ರೆಸ್ ಸರಕಾರ, ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ ಎಂದು ದೂರಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯಗೆ ಹಿಂದೂಗಳು ಏನ್ ದ್ರೋಹ ಮಾಡಿದ್ದಾರೆ: ಯಡಿಯೂರಪ್ಪ ಪ್ರಶ್ನೆ