Select Your Language

Notifications

webdunia
webdunia
webdunia
webdunia

ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ: ಸರ್ಕಾರದ ವಿರುದ್ಧ ವಿಜಯೇಂದ್ರ ಗರಂ

ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ:  ಸರ್ಕಾರದ ವಿರುದ್ಧ ವಿಜಯೇಂದ್ರ ಗರಂ

Sampriya

ಬೆಂಗಳೂರು , ಗುರುವಾರ, 27 ಮಾರ್ಚ್ 2025 (16:17 IST)
ಬೆಂಗಳೂರು: ಮತ್ತೇ ಹಾಲಿನ ದರ ₹4 ಹೆಚ್ಚಳ ಮಾಡವು ಮೂಲಕ, ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಮುಂದುವರೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ಬೆಲೆ ಏರಿಕೆ ಬಗ್ಗೆ ಅಸಮಾಧಾನ ಹೊರಹಾಕಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಪಂಚ ಭಾಗ್ಯಗಳನ್ನು ನಿರ್ವಹಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ದೌರ್ಭಾಗ್ಯವನ್ನು ನಿರಂತರ ಹೇರುತ್ತಲೇ ಬರುತ್ತಿದೆ. ಕುಡಿಯುವ ನೀರು, ವಿದ್ಯುತ್ ಬಿಲ್, ಸಾರಿಗೆ, ಅಗತ್ಯ ವಸ್ತುಗಳು ಹೀಗೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿಯನ್ನು ಜನ ಅನುಭವಿಸುತ್ತಿರುವ ಹೊತ್ತಿನಲ್ಲೇ, ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 2 ನೇ ಬಾರಿ ಹಾಲಿನ ದರ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆ ಬರೆ ಎಳೆಯುವಲ್ಲಿ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಸದ್ಯ ಹಾಲಿನ ದರ 4 ರೂ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರ ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ.

ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯಕ್ಕೆ ಹೆಚ್ಚಿನ ದರ ಹಾಗೂ ಪ್ರೋತ್ಸಾಹ ಧನವನ್ನು ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೇ ಹೊರತು, ಈ ಕಾರಣವನ್ನು ಮುಂದಿಟ್ಟುಕೊಂಡು ಜನರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿಸಲು ಹೊರಟಿರುವುದು 'ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನಡೆಯಾಗುತ್ತದೆ'. ರೈತರನ್ನೂ ಉತ್ತೇಜಿಸಬೇಕು ಜನಸಾಮಾನ್ಯರ ಹಿತಾಸಕ್ತಿಯನ್ನೂ ಕಾಪಾಡಬೇಕು, ಇದು ಸಮರ್ಥ ಜನಪರ ಹಾಗೂ ಯೋಗ್ಯ ಸರ್ಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ಯಾವ ಅರ್ಹತೆಗಳೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ ಇಲ್ಲ.

ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯನ್ನು ಬಿಜೆಪಿ ನಿರಂತರ ಪ್ರತಿಭಟಿಸುತ್ತಲೇ ಬರುತ್ತಿದ್ದರೂ ಈ ಸರ್ಕಾರ ಜನಾಕ್ರೋಶಕ್ಕೆ ಕ್ಯಾರೇ ಎನ್ನುತ್ತಿಲ್ಲ, ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಏನೇನು ಈಗ ಉಳಿದಿಲ್ಲ, ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಸರ್ಕಾರ ಅನಾವರಣಗೊಳಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬವೂ ಬಳಸುವ ಹಾಲಿನ ದರವನ್ನು ಏರಿಸಲು ಸಂಪುಟ ನಿರ್ಧರಿಸಿರುವ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸುತ್ತೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಸನಗೌಡ ಪಾಟೀಲ್ ಯತ್ನಾಳ್ ಗೆ ಬೆಂಬಲ: ಬಿಜೆಪಿ ಭಿನ್ನ ನಾಯಕರ ಮಹತ್ವದ ನಿರ್ಧಾರ