ನವದೆಹಲಿ: ವಕ್ಫ್ ಬಿಲ್ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇದು ಮುಸ್ಲಿಮರನ್ನು ಟಾರ್ಗೆಟ್ ಮಾಡಿರುವ ಮತ್ತು ಬಿಜೆಪಿ, ಆರ್ ಎಸ್ಎಸ್ ನಿಂದ ಸಂವಿಧಾನದ ಮೇಲೆ ನಡೆದ ಅಟ್ಯಾಕ್ ಎಂದಿದ್ದಾರೆ.
ವಕ್ಫ್ ತಿದ್ದುಪಡಿ ಬಿಲ್ ಸಂವಿಧಾನದ ಆರ್ಟಿಕಲ್ 25 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಮುಸ್ಲಿಮರ ಹಕ್ಕುಗಳನ್ನು ಕಸಿಯುವ ಉದ್ದೇಶದಿಂದ ಮಾಡಿರುವ ತಿದ್ದುಪಡಿ ಬಿಲ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರ ವೈಯಕ್ತಿಕ ಕಾನೂನು ಮತ್ತು ಸ್ವತ್ತಿನ ಮೇಲಿರುವ ಹಕ್ಕುಗಳನ್ನು ಕಸಿಯುವುದಕ್ಕಾಗಿ ಬಿಜೆಪಿ ಸರ್ಕಾರ ಮಾಡಿರುವ ದಾಳಿ ಇದಾಗಿದೆ. ಬಿಜೆಪಿ ಮತ್ತು ಆರ್ ಎಸ್ಎಸ್ ಇಂದು ಸಂವಿಧಾನದ ಮೇಲೆ ಮಾಡಿರುವ ಈ ದಾಳಿ ಮುಸ್ಲಿಮರ ವಿರುದ್ಧವಾಗಿದೆ, ಮುಂದೆ ಇವರು ಇನ್ನೊಂದು ಸಮುದಾಯದ ಮೇಲೂ ದಾಳಿ ಮಾಡಬಹುದು. ಕಾಂಗ್ರೆಸ್ ಈ ಬಿಲ್ ನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ನಿನ್ನೆ ವಕ್ಫ್ ಬಿಲ್ ಮಂಡನೆ ವೇಳೆ ರಾಹುಲ್ ಗಾಂಧಿ ಆದಿಯಾಗಿ ವಿಪಕ್ಷ ನಾಯಕರು ತೀವ್ರ ಗದ್ದಲವೆಬ್ಬಿಸಿದ್ದರು. ಅಲ್ಲದೆ, ಚರ್ಚೆ ವೇಳೆಯೂ ತಮ್ಮ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು.