ಬೆಂಗಳೂರು: ಪ್ರತಿನಿತ್ಯ ಮೆಟ್ರೋ ಬಳಸಿ ಕಚೇರಿಗೆ, ಕಾಲೇಜಿಗೆ ಹೋಗುವವರ ಸಂಖ್ಯೆ ಬೆಂಗಳೂರಿನಲ್ಲಿ ಸಾಕಷ್ಟಿದೆ. ಆದರೆ ಇಂದು ಬೆಳಿಗ್ಗೆಯೇ ಪೀಕ್ ಅವರ್ ನಲ್ಲಿ ಮೆಟ್ರೋ ಕೈ ಕೊಟ್ಟಿದ್ದರಿಂದ ಸಾಕಷ್ಟು ಜನ ಪ್ರಯಾಣಿಕರು ಪರದಾಡುವಂತಾಯಿತು. ಈ ವಿಡಿಯೋ ಈಗ ವೈರಲ್ ಆಗಿದೆ.
ಸಂಸದ ಪಿಸಿ ಮೋಹನ್ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ಇಂದು ಬೆಳಿಗ್ಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದ ದೃಶ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಪೀಕ್ ಅವರ್ ನಲ್ಲಿ ಜನರಿಗೆ ಯಾವ ರೀತಿ ತೊಂದರೆ ಕೊಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಂದು ದಿಡೀರ್ ಆಗಿ ಮೆಟ್ರೋ ಪೀಕ್ ಅವರ್ ನಲ್ಲಿ ಮೆಟ್ರೋ ಫ್ರೀಕ್ವೆನ್ಸಿ ಕಡಿಮೆ ಮಾಡಿತು. ಸಾಮಾನ್ಯವಾಗಿ 10 ನಿಮಿಷಕ್ಕೊಂದು ಮೆಟ್ರೋ ಇರುತ್ತದೆ. ಆದರೆ ಇಂದು ಬೆಳಿಗ್ಗಿನ ಬ್ಯುಸಿ ಅವಧಿಯಲ್ಲೇ ಮೆಟ್ರೋ ರೈಲು ಕಡಿಮೆ ಮಾಡಿದ್ದು ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ನಿಲ್ದಾಣದಲ್ಲಿ ಸೇರಿ ನೂಕುನುಗ್ಗಲಿನ ಪರಿಸ್ಥಿತಿಯಾಗಿದೆ.
ಸಾಮಾನ್ಯವಾಗಿ ಸೋಮವಾರಗಳಂದು ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಅದರಲ್ಲೂ ಬೆಳಗಿನ ಅವಧಿಯಲ್ಲಿ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಆ ಸಂದರ್ಭದಲ್ಲೇ ಮೆಟ್ರೋ ರೈಲು ಅವಧಿ ಕಡಿಮೆ ಮಾಡಿದ್ದಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.