ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಯನ್ನು ಎನ್ ಕೌಂಟರ್ ಮಾಡಿದ ಲೇಡಿ ಪಿಎಸ್ಐ ಅನ್ನಪೂರ್ಣ ಅವರನ್ನು ಭೇಟಿ ಮಾಡಿದ ಸಚಿವ ಸಂತೋಷ್ ಲಾಡ್ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದ್ದಾರೆ.
ಐದು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ತೀವ್ರ ಸಂಚಲನ ಮೂಡಿಸಿತ್ತು. ಸಾರ್ವಜನಿಕರೂ ಆರೋಪಿಯನ್ನು ಎನ್ ಕೌಂಟರ್ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದರು. ಬಿಹಾರ ಮೂಲದ ಆರೋಪಿಯನ್ನು ಹಿಡಿಯಲು ಹೋದಾಗ ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ.
ಹೀಗಾಗಿ ಪಿಎಸ್ಐ ಅನ್ನಪೂರ್ಣ ಆರೋಪಿಗೆ ಗುಂಡು ಹಾರಿಸಿದ್ದು ಆತ ಸಾವನ್ನಪ್ಪಿದ್ದಾನೆ. ಇದಾದ ಬಳಿಕ ಲೇಡಿ ಆಫೀಸರ್ ಅನ್ನಪೂರ್ಣ ಮತ್ತು ಇತರೆ ಪೊಲೀಸರನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ.
ಇನ್ನು ಆರೋಪಿಯಿಂದ ದಾಳಿಗೊಳಗಾದ ಹಿನ್ನಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮೂವರು ಪೊಲೀಸ್ ಅಧಿಕಾರಿಗಳನ್ನು ಇಂದು ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಆರೋಗ್ಯ ವಿಚಾರಸಿದರು.
ಲೇಡಿ ಪಿಎಸ್ಐ ಅನ್ನಪೂರ್ಣ ಇರುವ ಬೆಡ್ ಕಡೆಗೆ ಬರುತ್ತಿದ್ದಂತೇ ಸಂತೋಷ್ ಲಾಡ್ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದ್ದಾರೆ. ಸದ್ಯಕ್ಕೆ ಅನ್ನಪೂರ್ಣ ಎದ್ದು ಕೂರುವ ಸ್ಥಿತಿಯಲ್ಲಿಲ್ಲ. ಆದರೆ ಆಕೆ ಮಾಡಿದ ಕಾರ್ಯವನ್ನು ಶ್ಲಾಘಿಸಿದ ಸಚಿವರು ಆರೋಗ್ಯ ವಿಚಾರಿಸಿ ಅಲ್ಲಿಂದ ತೆರಳಿದ್ದಾರೆ.