ಬೆಂಗಳೂರು: ರಾಜ್ಯದ ಗೃಹಸಚಿವ ಜಿ ಪರಮೇಶ್ವರ್ ಮತ್ತೆ ತಮ್ಮ ಹೇಳಿಕೆಯಿಂದಲೇ ವಿವಾದಕ್ಕೀಡಾಗಿದ್ದಾರೆ. ಬಿಟಿಎಂ ಲೇಔಟ್ ನಲ್ಲಿ ಯುವತಿ ಮೇಲೆ ಯುವಕನೊಬ್ಬ ನಡು ರಸ್ತೆಯಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ಇಂತಹ ಘಟನೆಗಳು ಸಾಮಾನ್ಯ ಎಂದು ಉಡಾಫೆಯಿಂದ ಹೇಳಿದ್ದಾರೆ.
ಬಿಟಿಎಂ ಲೇಔಟ್ ನಲ್ಲಿ ಏಪ್ರಿಲ್ 2 ರಂದು ತಡರಾತ್ರಿ ತನ್ನ ಗೆಳತಿಯೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ಅಪರಿಚಿತ ಯುವಕ ಆಕೆಯನ್ನು ತಬ್ಬಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನಗರ ಪೊಲೀಸರು ಎಚ್ಚೆತ್ತುಕೊಂಡು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ ಈ ಬಗ್ಗೆ ಇಂದು ಮಾಧ್ಯಮಗಳು ಕೇಳಿದಾಗ ಗೃಹಸಚಿವ ಪರಮೇಶ್ವರ್ ಉಡಾಫೆಯ ಉತ್ತರ ನೀಡಿದ್ದಾರೆ.
ಪ್ರತೀ ಏರಿಯಾವನ್ನು ಮಾನಿಟರ್ ಮಾಡಬೇಕು, ರಾತ್ರಿ ಬೀಟ್ ಹಾಕಬೇಕು ಎಂದು ಪೊಲೀಸರಿಗೆ ಸೂಚನೆ ಕೊಡುತ್ತಲೇ ಇರುತ್ತವೆ. ಅದರ ನಡುವೆಯೂ ಇಂತಹ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತಿರುತ್ತದೆ ಎಂದಿದ್ದಾರೆ. ಅವರ ಈ ಹೇಳಿಕೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಗೃಹಸಚಿವರಾಗಿದ್ದುಕೊಂಡು ಇಂತಹ ಘಟನೆಯನ್ನು ಸಾಮಾನ್ಯ ಎಂದು ಉಡಾಫೆ ಮಾಡಿದರೆ ಜನರ ಗತಿಯೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.