ಬೆಂಗಳೂರು: ಹುಳಿಮಾವಿನಲ್ಲಿ ಪತ್ನಿ ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ್ದ ಪತಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ವಿಚಾರಣೆಯಲ್ಲಿ ಕೊಲೆಗೆ ಕಾರಣವೇನೆಂದು ಪತಿ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.
ಹುಳಿಮಾವು ವ್ಯಾಪ್ತಿಯಲ್ಲಿ ಕಳೆದ ವಾರ ನಡೆದಿದ್ದ ಭೀಕರ ಕೊಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪತ್ನಿಯನ್ನು ಕೊಲೆ ಮಾಡಿ ಪತಿ ಸೂಟ್ ಕೇಸ್ ನಲ್ಲಿ ಮೃತದೇಹ ತುಂಬಿ ತನ್ನ ತವರು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ. ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ಇದೀಗ ಆರೋಪಿಯನ್ನು ಬೆಂಗಳೂರಿಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದ ಪ್ರಕರಣದ ಹಿಂದಿನ ಕಾರಣವೇನೆಂದು ಆತ ಬಾಯ್ಬಿಟ್ಟಿದ್ದಾನೆ. ನನ್ನ ಪತ್ನಿ ವಿಪರೀತ ಜಗಳವಾಡುತ್ತಿದ್ದಳು. ಆ ದಿನವೂ ಜಗಳವಾಗಿ ಹತ್ಯೆ ಮಾಡಿದ್ದೇನೆ ಎಂದಿದ್ದಾನೆ.
ನನ್ನ ಪತ್ನಿ ನಮ್ಮ ಕುಟುಂಬದ ಯಾರ ಜೊತೆಗೂ ಹೊಂದಿಕೊಳ್ಳಲಿಲ್ಲ. ಎಲ್ಲಾ ಅವಳದ್ದೇ ನಡೆಯಬೇಕು ಎಂಬ ಹಠ. ಕೊನೆಗೆ ಬೆಂಗಳೂರಿಗೆ ಹೋಗೋಣ, ಅಲ್ಲಿಯೇ ಕೆಲಸ ಹುಡುಕಿಕೊಳ್ಳುತ್ತೇನೆ ಎಂದಳು. ಇಲ್ಲಿಗೆ ಬಂದ ಮೇಲೆ ಅವಳಿಗೆ ಕೆಲಸ ಹುಡುಕಲು ನಾನು ಸಹಾಯ ಮಾಡಿದರೂ ಮಾಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದಳು. ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದುದಕ್ಕೂ ಆಕ್ಷೇಪಿಸುತ್ತಿದ್ದಳು. ಇದೇ ವಿಚಾರವಾಗಿ ಆಗಾಗ ನಮ್ಮ ನಡುವೆ ಜಗಳವಾಗುತ್ತಿತ್ತು.
ಆ ದಿನವೂ ಅದೇ ರೀತಿ ಜಗಳವಾಗಿತ್ತು. ಆಗ ಅವಳು ಚಾಕುವಿನಿಂದ ನನಗೆ ಹೊಡೆಯಲು ಬಂದಳು. ನನ್ನನ್ನು ನಾನು ರಕ್ಷಿಸಿಕೊಳ್ಳಲು ಚಾಕುವಿನಿಂದ ಅವಳ ಕುತ್ತಿಗೆಗೆ ಇರಿದೆ. ಅವಳು ಸಾವನಪ್ಪಿದ ನಂತರ ಏನು ಮಾಡಬೇಕೆಂದು ತೋಚಲಿಲ್ಲ. ಇದಕ್ಕೇ ಮೃತದೇಹವನ್ನು ಸೂಟ್ ಕೇಸ್ ಗೆ ತುಂಬಿ ಅಲ್ಲಿಂದ ತೆರಳಿದೆ ಎಂದು ಆರೋಪಿ ಪತಿ ರಾಕೇಶ್ ಹೇಳಿಕೆ ನೀಡಿದ್ದಾನೆ.