ಬೆಂಗಳೂರು: ಕಳೆದ ವರ್ಷ ಪಿಯುಸಿಯಲ್ಲಿ ಫೇಲ್ ಆದ ಮಗಳನ್ನು ಕೊಂದ ತಾಯಿಗೆ ಇದೀಗ ಬೆಂಗಳೂರಿನ ಕೋರ್ಟ್ ಶಿಕ್ಷೆ ವಿಧಿಸಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಕಳೆದ ವರ್ಷ ಘಟನೆ ನಡೆದಿತ್ತು. ಆರೋಪಿ ತಾಯಿ ಬನಶಂಕರಿ ನಿವಾಸಿ 59 ವರ್ಷದ ಗೃಹಿಣಿ ಭೀಮನೇನಿ ಪದ್ಮಿನಿ ರಾಣಿ. 17 ವರ್ಷದ ಆಕೆಯ ಪುತ್ರಿ ಸಾಹಿತಿ ಶಿವಪ್ರಿಯ ಪಿಯುಸಿಯಲ್ಲಿ ತಾನು ಫೇಲ್ ಆದರೂ ಭಯಗೊಂಡಿದ್ದ ತನಗೆ 95% ಅಂಕ ಬಂದಿದೆ ಎಂದು ಸುಳ್ಳು ಹೇಳಿದ್ದಳು.
ಆದರೆ ಏಪ್ರಿಲ್ 28 ರಂದು ತಾಯಿ ಬಳಿ ತಾನು ಒಂದು ಸಬ್ಜೆಕ್ಟ್ ನಲ್ಲಿ ಫೇಲ್ ಆಗಿರುವುದಾಗಿ ಬಾಯ್ಬಿಟ್ಟಿದ್ದಳು. ಅಲ್ಲದೆ, ತಾನು ಫೇಲ್ ಆಗುವುದಕ್ಕೆ ತಾಯಿಯೇ ಕಾರಣ ಎಂದಿದ್ದಳು. ನೀನು ನನಗೆ ಪ್ರೋತ್ಸಾಹ ಕೊಡಲಿಲ್ಲ ಎಂದು ದೂರಿದ್ದಳು. ಇದೇ ಬೇಸರದಲ್ಲಿ ಆಕೆಯ ಗೆಳತಿಯನ್ನು ತಾಯಿ ಪದ್ಮಿನಿ ರಾಣಿ ಮನೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಳು.
ಆಗ ಗೆಳತಿ ಆಕೆ ಒಂದಲ್ಲ ನಾಲ್ಕು ಸಬ್ಜೆಕ್ಟ್ ನಲ್ಲಿ ಫೇಲ್ ಆಗಿರುವ ವಿಚಾರ ಹೇಳಿದ್ದಳು. ಈ ಬಗ್ಗೆ ಮಗಳ ಬಳಿ ಮತ್ತೆ ಕೇಳಿದಾಗ ಆಕೆ ಸರಿಯಾಗಿ ಉತ್ತರ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪದ್ಮಿನಿ ರಾಣಿ ತನ್ನ ಮಗಳನ್ನು ಅಡುಗೆ ಮನೆಯಲ್ಲಿ ಬಳಸುವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಏಪ್ರಿಲ್ 29 ರಂದು ಕೊಲೆ ನಡೆದಿತ್ತು.
ಅದಾಗಲೇ ಪದ್ಮಿನಿ ತಮ್ಮ ಸಂಬಂಧಿಕರ ಬಳಿಕ ಮಗಳಿಗೆ 95% ಅಂಕ ಬಂದಿದೆ ಎಂದು ಹೇಳಿಕೊಂಡಿದ್ದಳು. ಈಗ ನಿಜ ಸ್ಥಿತಿ ಅರಿತರೆ ನಾಚಿಕೆಗೇಡು ಎಂದು ಅವರಿಗೆ ಅರಿವಾಗಿತ್ತು. ಮದುವೆಯಾಗಿ 16 ವರ್ಷದ ಬಳಿಕ ಜನಿಸಿದ ಮಗಳು. 2020 ರಲ್ಲಿ ಗಂಡನೂ ತೀರಿಕೊಂಡಿದ್ದರು. ಇದಾದ ಬಳಿಕ ಮಗಳೇ ಆಕೆಯ ಪ್ರಪಂಚವಾಗಿದ್ದಳು. ಆದರೆ ಈಗ ಮಗಳು ಇಂಥಾ ಮೋಸ ಮಾಡಿರುವುದನ್ನು ಆಕೆ ಸಹಿಸಲಿಲ್ಲ. ಹೀಗಾಗಿ ಅವಳನ್ನು ಕೊಂದು ತಾನೂ ಸಾಯಲು ಯೋಜನೆ ಹಾಕಿದ್ದರು.
ಆದರೆ ಅಷ್ಟರಲ್ಲಿ ಆಕೆಯ ಬಂಧನವಾಗಿದೆ. ಇದೀಗ ಬೆಂಗಳೂರಿನ ಕೋರ್ಟ್ ಪದ್ಮಿನಿ ರಾಣಿಗೆ ಜೀವಾವಧಿ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿ ಶಿಕ್ಷೆ ನೀಡಿದೆ.