ಬೆಂಗಳೂರು: 8 ತಿಂಗಳ ಮಗುವಿಗೆ ಎಚ್ ಎಂಪಿವಿ ವೈರಸ್ ಪತ್ತೆಯಾದ ಬೆನ್ನಲ್ಲೇ ಆತಂಕ ಮನೆ ಮಾಡಿದ್ದು 15 ದಿನಗಳ ಹಿಂದೆ ಕುಟುಂಬ ತಿರುಪತಿಗೆ ಪ್ರಯಾಣ ಮಾಡಿತ್ತು ಎನ್ನಲಾಗಿದೆ.
ಮಗು ಮತ್ತು ಕುಟುಂಬಸ್ಥರ ಟ್ರಾವೆಲ್ ಹಿಸ್ಟರಿ ವಿವರ ಕಲೆ ಹಾಕಲಾಗುತ್ತಿದೆ. ಈ ವೇಳೆ ಈ ಕುಟುಂಬ ಚೀನಾಗೆ ತೆರಳಿರಲಿಲ್ಲ. ಆದರೆ 15 ದಿನಗಳ ಹಿಂದೆ ತಿರುಪತಿಗೆ ಭೇಟಿ ಕೊಟ್ಟಿತ್ತು ಎಂಬುದು ಬಯಲಾಗಿದೆ.
ಇನ್ನು ಮಗುವಿನಲ್ಲಿ ಪತ್ತೆಯಾಗಿರುವ ಎಚ್ ಎಂಪಿವಿ ವೈರಸ್ ಚೀನಾ ತಳಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ಹಾಗಿದ್ದರೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಇನ್ನಷ್ಟು ಜನರಿಗೆ ಸೋಂಕು ಹರಡಿದೆಯೇ ಮತ್ತು ಹರಡಿದ್ದರೆ ಹೆಚ್ಚಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕಿದೆ.
ಇಂದು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಲಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯಿಂದಲೂ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಇಲಾಖೆಗೆ ಸಲಹೆ ಸೂಚನೆ ಬರುವ ನಿರೀಕ್ಷೆಯಿದೆ. ಸದ್ಯಕ್ಕೆ ಯಾವುದೇ ಆತಂಕ ಬೇಡ ಆದರೆ ಮುನ್ನೆಚ್ಚರಿಕೆಯಿರಲಿ ಎಂದು ಆರೋಗ್ಯ ಇಲಾಖೆ ಹೇಳುತ್ತಿದೆ.