ಬೀಜಿಂಗ್: ಮಹಾಮಾರಿ ಕೊರೋನಾ ವೈರಸ್ ಬಂದು ಐದು ವರ್ಷಗಳಾಗುತ್ತಿರುವ ಬೆನ್ನಲ್ಲೇ ಚೀನಾದಲ್ಲಿ ಮತ್ತೊಂದು ಆತಂಕಕಾರೀ ವೈರಸ್ ಬಂದಿದ್ದು ಮರಣ ಮೃದಂಗ ಭಾರಿಸುತ್ತಿದೆ ಎಂಬ ಆತಂಕಕಾರೀ ಸುದ್ದಿ ಬಂದಿದೆ. ಅಷ್ಟಕ್ಕೂ ಈ HMPV ವೈರಸ್ ಎಂದರೇನು ಇಲ್ಲಿದೆ ವಿವರ.
ಕೊವಿಡ್ ಕೂಡಾ ಚೀನಾದಿಂದಲೇ ಜಗತ್ತಿನಾದ್ಯಂತ ಹರಡಿತ್ತು. ಇದೀಗ ಮತ್ತೊಂದು ಮಹಾಮಾರಿ ಚೀನಾದಿಂದ ಜಗತ್ತಿನಾದ್ಯಂತ ಹರಡುವ ಭೀತಿ ಎದುರಾಗಿದೆ. ಮಾನವ ಮೆಟಾಪ್ನ್ಯೂವೈರಸ್ (HMPV) ಚೀನಾದಾದ್ಯಂತ ಹಬ್ಬಿದೆ. ಇದರಿಂದ ಸಾವಿರಾರು ಮಂದಿ ಆಸ್ಪತ್ರೆಗಳತ್ತ ದೌಢಾಯಿಸುತ್ತಿದ್ದಾರೆ. ಈ ಬಗ್ಗೆ ಕೆಲವು ವಿಡಿಯೋಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಇನ್ನೂ ಚೀನಾ ಸರ್ಕಾರ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಕೆಲವು ಸೋಷಿಯಲ್ ಮೀಡಿಯಾ ವರದಿಗಲ ಪ್ರಕಾರ ಮೆಟಾಪ್ನ್ಯೂವೈರಸ್, ನ್ಯುಮೋನಿಯಾ, ಕೊರೋನಾ ಸೇರಿದಂತೆ ಹಲವು ಸೋಂಕು ರೋಗಗಳು ಭಾರೀ ಪ್ರಮಾಣದಲ್ಲಿ ಹರಡುತ್ತಿವೆ.
HMPV ವೈರಸ್ ಎಂದರೇನು, ಲಕ್ಷಣಗಳೇನು
ಮಾನವ ಮೆಟಾಪ್ನ್ಯೂವೈರಸ್ ಎಂದರೆ ವಿಶೇಷವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬರಬಹುದಾದ ಉಸಿರಾಟದ ಸೋಂಕಿನ ಅನಾರೋಗ್ಯವಾಗಿದೆ. ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಇದು ಬೇಗನೇ ತಗುಲುತ್ತದೆ. ಸಾಮಾನ್ಯ ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಇತ್ಯಾದಿ ಇದರ ಲಕ್ಷಣಗಳಾಗಿವೆ.
ಅಪಾಯಗಳೇನು?
ಈ ಸೋಂಕು ಉಲ್ಬಣಗೊಂಡರೆ ವಿಶೇಷವಾಗಿ 5 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಲ್ಲಿ ನ್ಯುಮೋನಿಯಾ, ಅಸ್ತಮಾ, ಬ್ರಾಂಕೈಟಿಸ್ ಸಮಸ್ಯೆ ಉಂಟು ಮಾಡಬಹುದು. ಸರಿಯಾಗಿ ಚಿಕಿತ್ಸೆ ಲಭಿಸದೇ ಹೋದರೆ ಪರಿಸ್ಥಿತಿ ಕೈಮೀರಿ ಹೋಗಬಹುದು.
ಮುನ್ನೆಚ್ಚರಿಕೆಗಳೇನು?
ಆಗಾಗ ಕೈ ತೊಳೆದುಕೊಳ್ಳುತ್ತಿರಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡಿ
ಸೋಂಕು ಪೀಡಿತ ಜನರೊಂದಿಗೆ ಸಂಪರ್ಕವಾಗದಂತೆ ಎಚ್ಚರಿಕೆ ವಹಿಸಿ.