ಬೆಂಗಳೂರು: ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಶೆಟ್ಟಿ ಗ್ಯಾಂಗ್ ಎಂದೇ ಪರಿಚಿತರು. ಆದರೆ ಈಗ ರಿಷಬ್ ಮತ್ತು ರಾಜ್ ನಡುವೆ ಎಲ್ಲವೂ ಸರಿಯಿಲ್ವಾ ಎಂಬ ಅನುಮಾನಗಳು ಮೂಡಿದ್ದವು. ಈ ಬಗ್ಗೆ ಈಗ ರಾಜ್ ಬಿ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಕಾಂತಾರ ಮೊದಲ ಸಿನಿಮಾದಲ್ಲಿ ಕೆಲಸ ಮಾಡಿದ್ದ ರಾಜ್ ಬಿ ಶೆಟ್ಟಿ ಬಳಿಕ ಕಾಂತಾರ ಚಾಪ್ಟರ್ 1 ರಿಂದ ದೂರವೇ ಉಳಿದಿದ್ದರು. ಸಿನಿಮಾಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಕೂಡಾ ಮಾಡಿರಲಿಲ್ಲ. ಇತ್ತೀಚೆಗೆ ರಿಷಬ್ ಶೆಟ್ಟಿ ಕೂಡಾ 45 ಸಿನಿಮಾ ಟ್ರೈಲರ್ ಬಗ್ಗೆ ಮಾತನಾಡುವ ರಾಜ್ ಹೆಸರು ಹೇಳಿರಲಿಲ್ಲ. ಹೀಗಾಗಿ ಇಬ್ಬರ ನಡುವೆ ಎಲ್ಲವೂ ಸರಿಯಿಲ್ವಾ ಎಂಬ ವದಂತಿ ಹಬ್ಬಿತ್ತು.
ಇದರ ಬಗ್ಗೆ ಈಗ ರಾಜ್ ಬಿ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಕೆಲಸ ಮಾಡಲು ಕೆಲವು ನನ್ನದೇ ಆದ ವೈರುದ್ಧ್ಯಗಳಿತ್ತು. ಆ ಕಾರಣಕ್ಕೆ ನಾನು ಸಿನಿಮಾದಿಂದ ದೂರವುಳಿದೆ. ಸಿನಿಮಾದಿಂದ ದೂರವುಳಿದ ಮೇಲೆ ಆ ಸಿನಿಮಾ ಬಗ್ಗೆ ಮಾತನಾಡುತ್ತಾ ಇರುವುದು ಸರಿಯಲ್ಲ ಎನಿಸಿತು. ಆದರೆ ಆರ್ಥಿಕವಾಗಿ ಕುಗ್ಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಮರು ಜೀವ ನೀಡಿದ್ದೇ ಕಾಂತಾರ ಚಾಪ್ಟರ್ 1. ಆ ಬಗ್ಗೆ ನನಗೆ ಹೆಮ್ಮೆಯಿದೆ.
ಇನ್ನು, ರಿಷಬ್ ಮತ್ತು ನನ್ನ ನಡುವೆ ವೈಮನಸ್ಯಗಳೇನೂ ಇಲ್ಲ. ಸು ಫ್ರಮ್ ಸೋ ಸಿನಿಮಾ ಸಂದರ್ಭದಲ್ಲೂ ನನಗೆ ವಿಶ್ ಮಾಡಿದ್ರು, ಹೊಗಳಿದ್ರು. ಈಗ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಅಗತ್ಯ ಬಂದಿಲ್ಲ. ಬಂದರೆ ಖಂಡಿತಾ ಒಟ್ಟಿಗೆ ಕೆಲಸ ಮಾಡುತ್ತೇವೆ. ಈಗ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿಗೇ ಕೆಲಸ ಮಾಡುವ ಅನಿವಾರ್ಯತೆ ಬಂದಿಲ್ಲ. ಬಂದಾಗ ನೋಡೋಣ ಎಂದಿದ್ದಾರೆ.